ಈ ವರ್ಷ ಮಳೆಯ ಅಭಾವದಿಂದ ಕೃಷಿಕರು ಹಾಗೂ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಪ್ರಕೃತಿಯ ಅನುಗ್ರಹಕ್ಕಾಗಿ ವೈದಿಕ ಪರಂಪರೆಯ ಪ್ರಕಾರ ಕಾರೀರಿ ಇಷ್ಟಿ ಯಾಗವನ್ನು ನೆರವೇರಿಸಲಾಗುತ್ತಿದೆ.

ಶಿರಸಿ: ನಾಡಿನಲ್ಲಿ ಉತ್ತಮ ಮಳೆಯಾಗಿ ಕೃಷಿಕರು ಸೇರಿದಂತೆ ಸಮಸ್ತ ಜೀವಜಗತ್ತಿಗೆ ಸುಭಿಕ್ಷೆ ಉಂಟಾಗಲಿ ಎಂಬ ಸಂಕಲ್ಪದೊಂದಿಗೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ‘ಕಾರೀರಿ ಇಷ್ಟಿ’ ಎಂಬ ಅಪರೂಪದ ಶ್ರೌತಯಾಗ ಆರಂಭಗೊಂಡಿದೆ. ಅ. 6ರಿಂದ ಯಾಗವು ಆರಂಭಗೊಂಡಿದ್ದು, ಅ. 9ರವರೆಗೆ ನಡೆಯಲಿದೆ.ಈ ವರ್ಷ ಮಳೆಯ ಅಭಾವದಿಂದ ಕೃಷಿಕರು ಹಾಗೂ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಪ್ರಕೃತಿಯ ಅನುಗ್ರಹಕ್ಕಾಗಿ ವೈದಿಕ ಪರಂಪರೆಯ ಪ್ರಕಾರ ಕಾರೀರಿ ಇಷ್ಟಿ ಯಾಗವನ್ನು ನೆರವೇರಿಸಲಾಗುತ್ತಿದೆ. ಸ್ವರ್ಣವಲ್ಲೀ‌ಯ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಈ ಯಾಗ ನೆರವೇರಲಿದೆ.ಮಳೆಗಾಗಿ ಪ್ರಾರ್ಥಿಸುವ ಈ ವೈದಿಕ ಅನುಷ್ಠಾನದಲ್ಲಿ ಪರ್ಜನ್ಯ, ಇಂದ್ರ, ವರುಣ ಹಾಗೂ ಮರುತ್ ದೇವತೆಗಳನ್ನು ಆವಾಹಿಸಿ ನಾಡಿನಲ್ಲಿ ಸುವೃಷ್ಟಿಯಾಗಲಿ, ಸಮಸ್ತ ಜನರಿಗೆ ಕ್ಷೇಮ ಹಾಗೂ ಸುಭಿಕ್ಷೆ ದೊರೆಯಲಿ ಎಂದು ಪ್ರಾರ್ಥಿಸಲಾಗುತ್ತಿದೆ.

ಕಾರೀರಿ ಇಷ್ಟಿ ಯಾಗ ಎಂದರೇನು?ಕಾರೀರಿ ಇಷ್ಟಿ ಯಾಗ ಎಂಬುದು ವೈದಿಕ ಸಂಪ್ರದಾಯದಲ್ಲಿ ಅತ್ಯಂತ ವಿಶಿಷ್ಟವಾದ ಮತ್ತು ವಿಶೇಷ ಯಜ್ಞವಾಗಿದೆ. ವೇದಗಳ ಪ್ರಕಾರ, ಈ ಯಾಗವನ್ನು ಮುಖ್ಯವಾಗಿ ಉತ್ತಮ ಮಳೆಗಾಗಿ ವರುಣ ಮತ್ತು ಪರ್ಜನ್ಯರನ್ನು ಒಲಿಸಿಕೊಳ್ಳಲು ಆಚರಿಸಲಾಗುತ್ತದೆ.ಸ್ವರ್ಣವಲ್ಲೀಯಲ್ಲಿ ಕೈಗೊಳ್ಳಲಾಗಿರುವ ಈ ಯಾಗದಲ್ಲಿ 8ರಿಂದ 10 ವೈದಿಕ ವಿದ್ವಾಂಸರು ಭಾಗಿಯಾಗಿದ್ದಾರೆ. ಈ ಹಿಂದೆಯೂ ಹಲವು ಬಾರಿ ಕಾರೀರಿ ಇಷ್ಟಿ ಯಾಗವನ್ನು ಕೈಗೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.