ವಿಜೃಂಭಣೆಯಿಂದ ನಡೆದ ಕಾರ್ಕಹಳ್ಳಿ ಬಸವೇಶ್ವರ ರಥೋತ್ಸವ

| Published : Mar 14 2025, 12:30 AM IST

ಸಾರಾಂಶ

ರಥೋತ್ಸವ ನಡೆಯುವ ಮುನ್ನ ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ, ಕಾರ್ಕಹಳ್ಳಿ ಶ್ರೀಬಸವೇಶ್ವರ ಬಸಪ್ಪ ಹಾಗೂ ಗ್ರಾಮ ದೇವತೆ ಶ್ರೀಪಟ್ಟಲದಮ್ಮ ಸೇರಿದಂತೆ ಇತರೆ ದೇವತೆಗಳ ಮೆರವಣಿಗೆ ಮೂಲಕ ಬಸವೇಶ್ವರ ದೇವರ ವಿಗ್ರಹವನ್ನು ರಥೋತ್ಸವ ಸ್ಥಳಕ್ಕೆ ಕರೆತರಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಭಕ್ತರ ಹರ್ಷೋದ್ಗಾರ, ಪಟಾಕಿಗಳ ಚಿತ್ತಾರ, ತಮಟೆ ವಾದ್ಯ, ಪೂಜಾ ಕುಣಿತದ ಕಲಾ ಮೇಳದೊಂದಿಗೆ ಕಾರ್ಕಹಳ್ಳಿ ಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ತಾಲೂಕು ಆಡಳಿತದ ನೇತ್ವದಲ್ಲಿ ಜರುಗಿದ ರಥೋತ್ಸವಕ್ಕೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ರಥದಲ್ಲಿದ್ದ ಶ್ರೀ ಬಸವೇಶ್ವರ ಉತ್ತವ ಮೂರ್ತಿಗೆ ಪೂಜೆ ಸಲ್ಲಿಸಿ ರಥ ಎಳೆಯುವುದರ ಮೂಲಕ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿ ನಾಡು ಸಮೃದ್ಧವಾಗಿ ರೈತರು ಉತ್ತಮ ಬೆಳೆ ಬೆಳೆಯಲು ಅನುಕೂಲವಾಗಿ ಪ್ರಗತಿ ಸಾಧಿಸಲಿ ಸರ್ವರಿಗೂ ಒಳಿತಾಗಲಿ ಎಂದು ಆಶೀಸಿದರು.

ರಥೋತ್ಸವ ನಡೆಯುವ ಮುನ್ನ ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ, ಕಾರ್ಕಹಳ್ಳಿ ಶ್ರೀಬಸವೇಶ್ವರ ಬಸಪ್ಪ ಹಾಗೂ ಗ್ರಾಮ ದೇವತೆ ಶ್ರೀಪಟ್ಟಲದಮ್ಮ ಸೇರಿದಂತೆ ಇತರೆ ದೇವತೆಗಳ ಮೆರವಣಿಗೆ ಮೂಲಕ ಬಸವೇಶ್ವರ ದೇವರ ವಿಗ್ರಹವನ್ನು ರಥೋತ್ಸವ ಸ್ಥಳಕ್ಕೆ ಕರೆತರಲಾಯಿತು.

ನಂತರ ಸಂಪ್ರಾದಾಯಿಕ ಪೂಜೆಯೊಂದಿಗೆ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಅಲ್ಲದೇ, ದೇವರ ಮೂರ್ತಿಗೆ ದೇವಾಲಯದ ಅರ್ಚಕರು ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿದರು.

ರಥೋತ್ಸವಕ್ಕೆ ಆಗಮಿಸಿದ ಸಹಸ್ರಾರು ಭಕ್ತಾದಿಗಳು ದೇವರನ್ನು ಮನದಲ್ಲಿ ನೆನದು ರಥಕ್ಕೆ ಹಣ್ಣು ಮತ್ತು ಜವನ ಎಸೆದು ತಮ್ಮ ಭಕ್ತಿ ಪ್ರದರ್ಶಿಸಿದರು. ಪೂಜಾ ಕುಣಿತ ತಂಡ ತನ್ನ ಕಲಾ ಪ್ರದರ್ಶನದೊಂದಿಗೆ ನೋಡುಗರ ಮೈಮನ ಸೆಳೆಯುತ್ತಾ ರಥೋತ್ಸವಕ್ಕೆ ಮೆರುಗು ನೀಡಿದವು.

ರಥೋತ್ಸವಕ್ಕೆ ಅಗತ್ಯವಾದ ತಯಾರಿಯನ್ನು ದೇವೇಗೌಡನದೊಡ್ಡಿ, ಮೆಣಸಗೆರೆ ಗ್ರಾಮದ ಮಾಡಿದ್ದರು. ಸುತ್ತಮುತ್ತಲ ಗ್ರಾಮಗಳಿಂದ ಅಲ್ಲದೆ ನಾನಾ ಜಿಲ್ಲೆಗಳಿಂದಲೂ ಭಕ್ತಾಧಿಗಳು ರಥೋತ್ಸವಕ್ಕೆ ಆಗಮಿಸಿದ್ದರು. ಸಾವಿರಾರು ಭಕ್ತಾದಿಗಳ ವೇದಘೋಷಗಳ ನಡುವೆ ರಥೋತ್ಸವದ ವಿಜೃಂಭಣೆಯಿಂದ ನೆರೆವೇರಿಸಲು ನೆರವಾದರು.

ರಥೋತ್ಸವಕ್ಕೆ ಆಗಮಿಸಿದ್ದ ಚಿಕ್ಕರಸಿನಕೆರೆ ಕಾಲಭೈರವೇಶ್ವರನ ಬಸಪ್ಪ ಹಾಗೂ ಕಾರ್ಕಹಳ್ಳಿ ಬಸವೇಶ್ವರ ಬಸಪ್ಪನಿಗೆ ಹಾಕಲಾಗಿದ್ದ, 500, 200, 100ರ ನೋಟುಗಳೇ ಆಭರಣಗಳಾಗಿತ್ತು. 5 ದಿನ ನಡೆದ ಜಾತ್ರೆಯಲ್ಲಿ ಕಟ್ಟಲಾಗಿದ್ದ ಅಂಗಡಿ-ಮುಂಗಟ್ಟುಗಳು ಜಾತ್ರೆಯ ಮೆರುಗನ್ನು ಹೆಚ್ಚಿಸುವಂತಿತ್ತು.

ಈ ವೇಳೆ ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್, ಕಂದಾಯ ಅಧಿಕಾರಿ ರವೀಂದ್ರ ಸೇರಿದಂತೆ ಮತ್ತಿತರಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳೂ ನಡೆಯದಂತೆ ಭಾರತೀನಗರ ಠಾಣೆ ಇನ್ಸ್‌ಪೆಕ್ಟರ್ ಆನಂದ್ ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.