ಕಾರ್ಕಳ: ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವನ್ನು ಕೇವಲ ಒಂದು ಸಮಾಜದ ಹಬ್ಬವಾಗಿ ಸೀಮಿತಗೊಳಿಸದೆ, ಕಾರ್ಕಳದ ಹಬ್ಬವಾಗಿ ಆಚರಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಫೆ.18ರಿಂದ ಹತ್ತು ದಿನಗಳ ಕಾಲ ಮಹಾಮಸ್ತಕಾಭಿಷೇಕ ನಡೆಯಲಿದೆ. ಈ ಧಾರ್ಮಿಕ ಕಾರ್ಯದಲ್ಲಿ ನಾಲ್ಕನೇ ಬಾರಿಗೆ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದರು.ಮಹಾಮಸ್ತಕಾಭಿಷೇಕಕ್ಕೆ ಸರ್ಕಾರದಿಂದ ಈಗಾಗಲೇ ಅಟ್ಟಳಿಗೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದು, ಕಾಮಗಾರಿಯೂ ಆರಂಭವಾಗಿದೆ. ಇನ್ನಷ್ಟು ನೆರವು ದೊರೆಯುವ ಭರವಸೆಯಿದೆ. ಹತ್ತು ದಿನಗಳ ಕಾಲ ನಡೆಯುವ ಮಹೋತ್ಸವದಲ್ಲಿ ಬೆಳಕಿನ ವ್ಯವಸ್ಥೆ, ಊಟೋಪಚಾರ ಸೇರಿದಂತೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗುವುದು. ರಸ್ತೆ ಅಭಿವೃದ್ಧಿಗೂ ಸರ್ಕಾರ ಹಣ ಮಂಜೂರು ಮಾಡಿದೆ. ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದ್ದು, ಹೆಚ್ಚುವರಿ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಯುಗಳ ಮುನಿ ಮಹಾರಾಜರು ಒಂದು ದಿನದ ಮಸ್ತಕಾಭಿಷೇಕದ ಜವಾಬ್ದಾರಿ ವಹಿಸಿಕೊಂಡಿರುವುದು ಈ ಬಾರಿಯ ವಿಶೇಷವಾಗಿದೆ. ಸಮಿತಿಯ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡವರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ವಿಶ್ವಾಸವಿದೆ. ಮಹೋತ್ಸವಕ್ಕೆ ಇನ್ನು 4 ತಿಂಗಳು ಮಾತ್ರ ಬಾಕಿಯಿದ್ದು, ಎಲ್ಲರೂ ಒಟ್ಟಾಗಿ ಶ್ರಮಿಸಿದಾಗ ಯಶಸ್ಸು ಸಾಧ್ಯ ಎಂದರು.ಡಾ. ರಾಜೇಂದ್ರ ಕುಮಾರ್ ಗೆ ಅನುಗ್ರಹ: ಕಾರ್ಕಳ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಮಹಾಮಸ್ತಕಾಭಿಷೇಕವನ್ನು ನೆರವೇರಿಸಲು ಡಾ. ರಾಜೇಂದ್ರ ಕುಮಾರ್ ಅವರಿಗೆ ಅನುಗ್ರಹ ದೊರೆತಿದೆ. ಪುಣ್ಯಾತ್ಮರು ಹಾಗೂ ಧರ್ಮಾತ್ಮರನ್ನು ದೇವರು ಕಾಪಾಡುತ್ತಾನೆ. ರಾಜೇಂದ್ರ ಕುಮಾರ್ ಅವರ ನಾಯಕತ್ವದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಮಹಾಮಸ್ತಕಾಭಿಷೇಕವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ, ಮಾದರಿ ಉತ್ಸವವಾಗಿ ಮೂಡಿಬರಬೇಕು ಎಂದರು.
ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಮುನಿ ಮಹಾರಾಜರ ಆಶೀರ್ವಾದದೊಂದಿಗೆ ಸಮಾಜದ ವತಿಯಿಂದ ರಾಜೇಂದ್ರ ಕುಮಾರ್ ಅವರಿಗೆ ಶ್ರೀ ದೇವರ ಪ್ರಸಾದ ನೀಡಲಾಯಿತು.
ಮಹಾಮಸ್ತಕಾಭಿಷೇಕ ಸಮಿತಿಯ ಉಪಾಧ್ಯಕ್ಷ ರತ್ನಾಕರ್ ರಾಜ್ ಅರಸ್ ಪಡುಬಿದ್ರಿ, ಅನಂತ್ರಾಜ್ ಪುವಣಿ ಹಾಗೂ ಕೋಶಾಧಿಕಾರಿ ಮೋಹನ್ ಪಡಿವಾಳ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿ, ಯೋಗರಾಜ್ ಶಾಸ್ತ್ರಿ ನಿರೂಪಿಸಿದರು.