ಅಮೆರಿಕಾದಲ್ಲಿ ಕಾರ್ಕಳ ಮೂಲದ ಶಟ್ಲರ್‌ ಆಯುಷ್ ಶೆಟ್ಟಿ ಐತಿಹಾಸಿಕ ಗೆಲವು

| Published : Jul 02 2025, 12:19 AM IST / Updated: Jul 02 2025, 12:20 AM IST

ಅಮೆರಿಕಾದಲ್ಲಿ ಕಾರ್ಕಳ ಮೂಲದ ಶಟ್ಲರ್‌ ಆಯುಷ್ ಶೆಟ್ಟಿ ಐತಿಹಾಸಿಕ ಗೆಲವು
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳದ ಸಾಣೂರಿನ ಪ್ರತಿಭಾವಂತ ಶಟ್ಲರ್ ಆಯುಷ್ ಶೆಟ್ಟಿ ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳದ ಸಾಣೂರಿನ ಪ್ರತಿಭಾವಂತ ಶಟ್ಲರ್ ಆಯುಷ್ ಶೆಟ್ಟಿ ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು ಕೆನಡಾದ 3ನೇ ಶ್ರೇಯಾಂಕಿತ ಆಟಗಾರ ಬ್ರಿಯಾನ್ ಯಾಂಗ್ ಅವರನ್ನು ನೇರ ಸೆಟ್‌ಗಳಲ್ಲಿ 21-18, 21-13 ಅಂತರದಲ್ಲಿ ಮಣಿಸಿ ಚಾಂಪಿಯನ್ ಪಟ್ಟ ಪಡೆದುಕೊಂಡರು.

ಇದು ಯಾಂಗ್ ವಿರುದ್ಧ ಆಯುಷ್‌ ಸಾಧಿಸಿದ 3ನೇ ಜಯವಾಗಿದ್ದು, ಭಾರತಕ್ಕೆ ಈ ವರ್ಷ ದೊರೆತ ಮೊದಲ ಬಿಡಬ್ಲ್ಯಎಫ್‌ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ.ಭಾರತಕ್ಕೆ ಹೆಮ್ಮೆಯ ಕ್ಷಣ:20ರ ಹರೆಯದ ಆಯುಷ್, 2023ರ ಜೂನಿಯರ್ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇದೀಗ ವಿದೇಶದಲ್ಲಿ ಭಾರತದ ಪರವಾಗಿ ಮೊದಲ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿ ಕೀರ್ತಿಗೊಳಿಸಿದ್ದಾರೆ. ಇದಕ್ಕೂ ಮುಂಚೆ ಭಾರತದ ಲಕ್ಷ್ಯ ಸೇನ್ 2023ರಲ್ಲಿ ‘ಕೆನಡಾ ಓಪನ್’ ಗೆದ್ದಿದ್ದರು. ಈ ಮೂಲಕ ಆಯುಷ್ ಶೆಟ್ಟಿ ಭಾರತದ ಯುವ ಕ್ರೀಡಾ ಭವಿಷ್ಯಕ್ಕೆ ಹೊಸ ಆಶಾಕಿರಣವಾಗಿ ಮೂಡಿಬಂದಿದ್ದಾರೆ.ತನ್ವಿ ಶರ್ಮಾ ರನ್ನರ್ ಅಪ್ : ವನಿತಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಇನ್ನೊಬ್ಬ ಯುವ ಶಟ್ಲರ್, 16 ವರ್ಷದ ತನ್ವಿ ಶರ್ಮಾ ತಮ್ಮ ಶಕ್ತಿಪರೀಕ್ಷೆಯಲ್ಲಿ ಅಮೆರಿಕದ ಬೀವೆನ್ ಜಾಂಗ್ ವಿರುದ್ಧ 21-11, 16-21, 21-10 ಅಂತರದಲ್ಲಿ ಸೋಲು ಕಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಯಾಗಿದ್ದಾರೆ. ಟೈಟಲ್ ಹೋರಾಟ 46 ನಿಮಿಷಗಳ ಕಾಲ ನಡೆದಿತು.

ಆಯುಷ್ ಶೆಟ್ಟಿ ಕಾರ್ಕಳದ ಹುಡುಗ: ಆಯುಷ್ ಶೆಟ್ಟಿ 2005ರ ಮೇ 3ರಂದು ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಜನಿಸಿದರು. ತಂದೆ ಸ್ಥಳೀಯ ಉದ್ಯಮಿ ರಾಮ್‌ಪ್ರಕಾಶ್ ಶೆಟ್ಟಿ ಹಾಗೂ ತಾಯಿ ಶಾಲ್ಮಲಿ ಶೆಟ್ಟಿ. 8ನೇ ವಯಸ್ಸಿನಲ್ಲಿ ತಂದೆಯಿಂದ ಪ್ರೇರಿತರಾಗಿ ಬ್ಯಾಡ್ಮಿಂಟನ್ ಪ್ರಾರಂಭಿಸಿದ ಆಯುಷ್, 10ನೇ ತರಗತಿ ವರೆಗೆ ಸ್ಥಳೀಯ ಪ್ರಕೃತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಬಳಿಕ ಉತ್ತಮ ತರಬೇತಿಗಾಗಿ ಬೆಂಗಳೂರಿಗೆ ತೆರಳಿದ ಅವರು, ಪ್ರಸಿದ್ಧ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿನಲ್ಲಿ ತರಬೇತಿ ಪಡೆದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ತಯಾರಾದರು.

ಪುತ್ರ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ತಂದೆ ರಾಮ್‌ಪ್ರಕಾಶ್ ಮತ್ತು ತಾಯಿ ಶಾಲ್ಮಲಿ ಶೆಟ್ಟಿ, ‘ಮಗನ ಈ ಸಾಧನೆ ನಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದ್ದು, ಭಾರತದ ಹೆಸರನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಎತ್ತರಕ್ಕೆ ತೆಗೆದುಕೊಂಡಿದ್ದಾರೆ’ ಎಂದರು. ಸರ್ಕಾರದ ಅಭಿನಂದನೆ:ಈ ಯಶಸ್ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದು, ‘ವೃತ್ತಿ ಜೀವನದ ಮೊದಲ ಸೂಪರ್-300 ಟೂರ್ನಿಯಲ್ಲೇ ಪ್ರಶಸ್ತಿ ಗೆದ್ದಿರುವ ಈ ಯುವ ಪ್ರತಿಭೆ ಕರ್ನಾಟಕದವನು ಎನ್ನುವುದು ಹೆಮ್ಮೆದಾಯಕ. ಅವರ ಮುಂದಿನ ಕ್ರೀಡಾ ಪಯಣ ಯಶಸ್ವಿಯಾಗಿ, ಭಾರತದ ಕೀರ್ತಿಯನ್ನು ಹೆಚ್ಚಿಸಲಿ’ ಎಂದು ಶುಭಹಾರೈಸಿದ್ದಾರೆ.