ಪತ್ತೊಂಜಿಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ 250 ಆಶ್ರಯ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಸೆ.12ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಕಾರ್ಕಳ : ಪತ್ತೊಂಜಿಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ 250 ಆಶ್ರಯ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಸೆ.12ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ‘ಸರ್ವರಿಗೂ ಸೂರು’ ಯೋಜನೆಯಡಿ ಕಾರ್ಕಳ ಪುರಸಭಾ ವ್ಯಾಪ್ತಿಯ ಬಡತನ ರೇಖೆಗಿಂತ ಕೆಳಗಿರುವ ವಸತಿರಹಿತರಿಗೆ ಪತ್ತೊಂಜಿಕಟ್ಟೆಯಲ್ಲಿ ಗುಂಪು ಮನೆ ಮಾದರಿಯಲ್ಲಿ 250 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಮನೆ ನಿರ್ಮಾಣ ಕಾಮಗಾರಿ ಹಾಗೂ ಮುಂದಿನ ಪ್ರಕ್ರಿಯೆಗಳಿಗೆ ತೊಡಕಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.ಶಾಸಕರು ಈವರೆಗೆ ಕೇವಲ ಒಂದು ಬಾರಿ ಆಶ್ರಯ ಸಮಿತಿ ಸಭೆ ನಡೆಸಿದ್ದು, ನೂರಾರು ಬಡ ಅರ್ಜಿದಾರರು ಈಗಾಗಲೇ ಮುಂಗಡ ಹಣ ಪಾವತಿಸಿದ್ದಾರೆ. ಫಲಾನುಭವಿಗಳ ಆಯ್ಕೆ ಪೂರ್ಣಗೊಳ್ಳದ ಕಾರಣ ಉಳಿದ ಹಣ ಪಾವತಿಸಲು ಸಾಧ್ಯವಾಗದೆ ಮನೆ ನಿರ್ಮಾಣ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಕಾಂಗ್ರೆಸ್ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶನಿವಾರ ಬೆಳಗ್ಗೆ 9.30ರಿಂದ ಪತ್ತೊಂಜಿಕಟ್ಟೆಯ ಗುಂಪು ಮನೆ ನಿವೇಶನದ ಮುಂಭಾಗದಲ್ಲಿ ಧರಣಿ ನಡೆಯಲಿದೆ.ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಧರಣಿಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು, ಬಡ ಜನರ ಸ್ವಂತ ಸೂರಿನ ಕನಸು ನನಸಾಗಿಸುವುದು ನಮ್ಮ ಬದ್ಧತೆ. ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖಾ ಸಚಿವರ ಗಮನಕ್ಕೆ ತಂದು, ಫಲಾನುಭವಿಗಳ ಆಯ್ಕೆಯನ್ನು ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಲಾಗುವುದು. ಶಾಸಕರ ವಿಳಂಬ ನೀತಿಯನ್ನು ಬಲವಾಗಿ ಖಂಡಿಸಲಾಗುವುದು ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶುಭದಾ ರಾವ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ದೇವಾಡಿಗ, ಮಹಿಳಾ ಅಧ್ಯಕ್ಷೆ ರೀನಾ ಜೂಲಿಯೆಟ್ ಡಿಸೋಜಾ, ಸುಬಿತ್ ಕುಮಾರ್, ಆಶ್ಫಕ್ ಅಹ್ಮದ್, ವಿನ್ನಿಬೋಲ್ಡ್, ನಳಿನಿ ಆಚಾರ್ಯ, ಪ್ರಭಾ ಕಿಶೋರ್, ಹರೀಶ್ ದೇವಾಡಿಗ, ಪ್ರವೀಣ್ ಶೆಟ್ಟಿ, ವಿವೇಕ್ ಶೆಣೈ, ಪ್ರಸನ್ನ ಶೆಟ್ಟಿಗಾರ್, ಚಂಪಾ ಸುನೀಲ್, ನವೀನ್ ದೇವಾಡಿಗ, ಪ್ರಭಾಕರ್ ಬಂಗೇರ, ಅನಿಸಾ ಖಾತುನ್, ಕಾಂತಿ ಶೆಟ್ಟಿ, ಮುರಳಿ ರಾಣೆ ಮಾರ್ಕೆಟ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.