ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಜ್ಞಾನಸುಧಾ ಸಂಸ್ಥೆಗಳು ಜ್ಞಾನದ ಭಂಡಾರವಾಗಿದೆ ಎಂದು ಎಂ.ಆರ್.ಜಿ.ಗ್ರೂಪ್‌ಗಳ ಸಂಸ್ಥಾಪಕ ಹಾಗೂ ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ ಹೇಳಿದರು.ಅವರು ಕಾರ್ಕಳ ಜ್ಞಾನಸುಧಾ ಗಣಿತ ನಗರದ ಕ್ಯಾಂಪಸ್‌ನಲ್ಲಿ ನಡೆದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ತಾಂತ್ರಿಕ ಶಿಕ್ಷಣದ ನಿರ್ದೇಶಕ ಪ್ರಸನ್ನ ಎಚ್. ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಮಯ ಪಾಲನೆ ಮುಖ್ಯವಾಗಿದೆ ಎಂದರು.
ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ರಾಜ್ಯದ ಆಸ್ತಿಯಾಗಿದ್ದು, ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಪಡೆಯುತ್ತಿರುವ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದು ಸಂತಸ ತಂದಿದೆ.ವಿದ್ಯಾವಂತರನ್ನಾಗಿ ಮಾಡುವುದು ಸುಲಭ, ಅದರಲ್ಲೂ ಸಂಸ್ಕಾರವನ್ನು ಕಲಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಭವಿಷ್ಯದ ಭಾರತ ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿದಾಗಿದೆ ಎಂದು ಹೇಳಿದರು.ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಸಂಸ್ಥೆಯ ಪೂರ್ವ ವಿದ್ಯಾರ್ಥಿ ಡಾ.ಗೌತಮ್ ಭಟ್, ಕಾಲೇಜಿನ ದಿನಗಳನ್ನು ಮೆಲುಕುಹಾಕಿದರು.ಈ ಸಂದರ್ಭ ೨೦೨೪ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ ಅಡ್ವಾನ್ಸ್ ಮೂಲಕ ಐಐಟಿ ಪ್ರವೇಶ ಪಡೆದ ಮೂವರು ವಿದ್ಯಾರ್ಥಿಗಳನ್ನು, ಜೆಇಇ ಮೈನ್ಸ್ ಮೂಲಕ ಎನ್‌ಐಟಿ ಪ್ರವೇಶ ಪಡೆದ ಎಂಟು ವಿದ್ಯಾರ್ಥಿಗಳನ್ನು, ನೀಟ್ ಮೂಲಕ ಎಂಬಿಬಿಎಸ್ ಪ್ರವೇಶ ಗಳಿಸಿದ ೧೫೫ ವಿದ್ಯಾರ್ಥಿಗಳನ್ನು, ಸಿ.ಎ. ಫೌಂಡೇಶನ್‌ನಲ್ಲಿ ತೇರ್ಗಡೆಗೊಂಡ ನಾಲ್ವರು ವಿದ್ಯಾರ್ಥಿಗಳನ್ನು, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಸಂಸ್ಥೆಯ ಮೂವರು ವಿದ್ಯಾರ್ಥಿಗಳನ್ನು ಹಾಗೂ ಕಳೆದ ಮೂರು ವರ್ಷಗಳಲ್ಲಿ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಹನ್ನೊಂದು ಪೂರ್ವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಪ್ರತಿ ಎಂ.ಬಿ.ಬಿ.ಎಸ್. ಸೀಟ್‌ಗೆ (೧೫೫) ೨೦೦೦ ರು.ನಂತೆ ಭಾರತೀಯ ಸೇನೆಗೆ ೩,೧೦,೦೦೦ ರು. ದೇಣಿಗೆಯಾಗಿ ನಿಡಲಾಯಿತು. ಒಟ್ಟು ೩ನೇ ಹಂತದಲ್ಲಿ ೭,೪೭,೫೦೦ ರೂಗಳ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಉಪನ್ಯಾಸಕಿ ಸಂಗೀತ ಕಾರ್ಯಕ್ರಮ ನಿರೂಪಿಸಿದರು. ಅನಿಲ್ ಕುಮಾರ್ ಜೈನ್ ವಂದಿಸಿದರು.