ಕಾರ್ಕಳ: ಭಾರಿ ಮಳೆ, ಸಿಡಿಲಿಗೆ ಮಹಿಳೆಗೆ ಗಾಯ

| Published : Dec 08 2024, 01:16 AM IST

ಸಾರಾಂಶ

ಪತ್ತಾಂಜಿ ಕಟ್ಟೆ ಮೂರು ಸೆನ್ಸ್ ಕಾಲೊನಿ ನಿವಾಸಿ ಚೈತನ್ಯ ಅವರಿಗೆ ಸಿಡಿಲು ಬಡಿದಿದ್ದು, ಗಾಯಗೊಂಡ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕಿನಲ್ಲಿ ಶನಿವಾರ ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಸಿಡಿಲಿಗೆ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಪತ್ತೊಂಜಿಕಟ್ಟೆಯಲ್ಲಿ ನಡೆದಿದೆ.

ಪತ್ತಾಂಜಿ ಕಟ್ಟೆ ಮೂರು ಸೆನ್ಸ್ ಕಾಲೊನಿ ನಿವಾಸಿ ಚೈತನ್ಯ ಅವರಿಗೆ ಸಂಜೆ ಸಿಡಿಲು ಬಡಿದಿದ್ದು, ಗಾಯಗೊಂಡ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಬ್ರಿ ತಾಲೂಕಿನ ಗ್ರಾಮಗಳಾದ ಬೆಳ್ವೆ, ಅಲ್ಬಾಡಿ, ಶೇಡಿಮನೆ, ಮಡಾಮಕ್ಕಿ, ಬೇಳಂಜೆ, ಕುಚ್ಚೂರು, ಚಾರ, ಹೆಬ್ರಿ, ಶಿವಪುರ, ಕೆರೆಬೆಟ್ಟು, ಮುದ್ರಾಡಿ, ಕಬ್ಬಿನಾಲೆ, ನಾಡ್ಪಾಲು, ವರಂಗ, ಪಡುಕುಡೂರು, ಅಂಡಾರಿನಲ್ಲಿ ಉತ್ತಮ ಮಳೆಯಾಗಿದೆ.ಗಾಳಿಗೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಿದೆ.

ಕಾರ್ಕಳ ತಾಲೂಕಿನ ಮರ್ಣೆ, ಶಿರ್ಲಾಲು, ಕೆರುವಾಶೆ, ಮಾಳ, ಮುಡಾರು, ದುರ್ಗಾ, ರೆಂಜಾಳ, ಕಲ್ಯಾ, ನಿಂಜೂರು, ಬೈಲೂರು, ನೀರೆ, ಕೌಡೂರು, ಕುಕ್ಕೂಂದೂರು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಅಕಾಲಿಕ ಮಳೆಗೆ ವಿವಿಧೆಡೆ ಹಾನಿಯುಂಟಾಗಿದೆ.

ಕಂಬಳಕ್ಕೆ ಮಳೆ ಕಾಟ:

ಹೆಬ್ರಿ ತಾಲೂಕಿನ ಸಾಂಪ್ರದಾಯಿಕ ಶೈಲಿಯ ಕಂಬಳವಾಗಿರುವ ಮೂಡುಕುಡೂರು ಕಂಬಳವು ಶನಿವಾರ ನಿಗದಿಯಾಗಿತ್ತು. ಮಳೆಯಿಂದಾಗಿ ಹೆಚ್ಚಿನ ಕೋಣಗಳು ಭಾಗವಹಿಸಿಲ್ಲ. ಆದರೆ ಸಾಂಪ್ರದಾಯಿಕ ಕಂಬಳದ ರೀತಿ, ರಿವಾಜುಗಳನ್ನು ನೆರವೇರಿಸಲಾಯಿತು. ಭಾನುವಾರ ಇತಿಹಾಸ ಪ್ರಸಿದ್ಧ ವರಂಗ ಸಾಂಪ್ರದಾಯಿಕ ಕಂಬಳ ನಡೆಯಲಿದೆ.

ಆಳ್ವಾಸ್ ಸಾಂಸ್ಕೃತಿಕ ವೈಭವ ಮುಂದೂಡಿಕೆ: ಕಾರ್ಕಳದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಮಳೆಯಿಂದಾಗಿ ರದ್ದುಗೊಳಿಸಲಾಗಿದ್ದು, ಕಾರ್ಯಕ್ರಮದ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ‌‌‌‌ಆಳ್ವಾಸ್ ನುಡಿಸಿರಿ, ವಿರಾಸತ್ ಕಾರ್ಕಳ ಘಟಕ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿಯಲ್ಲೂ ದಿಢೀರ್‌ ಮಳೆಶನಿವಾರ ಬೆಳಗ್ಗೆ ಉಡುಪಿ ಮತ್ತು ಮಣಿಪಾಲಗಳಲ್ಲಿ ಕೆಲವು ನಿಮಿಷಗಳ‍ ಕಾಲ ಧಾರಾಕಾರ ಮಳೆಯಾಗಿದೆ. ಅಚ್ಚರಿ ಎಂದರೆ ಬಿಸಿಲಿನ ವಾತಾವರಣದ ಮಧ್ಯೆ ಮೋಡ ಕವಿದು ಮಣಿಪಾಲ- ಉಡುಪಿ ನಡುವೆ ಮಾತ್ರ ಮಳೆಯಾಗಿದೆ.ಹವಾಮಾನ ಇಲಾಖೆ ಇನ್ನು ಕೆಲವು ದಿನ ಚಂಡಮಾರುತ ಪರಿಣಾಮದಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿತ್ತು. ಶನಿವಾರ ದಿಢೀರ್ ಮಳೆಯಾದ್ದರಿಂದ ಜನರ ಸಂಚಾರದಲ್ಲಿ ಕೆಲವು ನಿಮಿಷಗಳ ಕಾಲ ಅಸ್ತವ್ಯಸ್ತ ಉಂಟಾಯಿತು. ನಂತರ ಮತ್ತೆ ಬಿಸಿಲು ಕಾಣಿಸಿಕೊಂಡಿತು.