ಕಾರ್ಕಳ ಬಾಹುಬಲಿ ಮಹಾಮಸ್ತಕಾಭೀಷೇಕ ಸಮಯದಲ್ಲಿ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ, ಕಾರ್ಕಳದ ಪ್ರಮುಖ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು, ವಿದ್ಯುತ್, ಶೌಚಾಲಯ, ಪಾರ್ಕಿಂಗ್ ಸೇರಿದಂತೆ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಗೆ ಸುಮಾರು 70 ಕೋಟಿ ರು. ಮೊತ್ತದ ಸಮಗ್ರ ಯೋಜನೆ ಸಿದ್ಧಪಡಿಸಲಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಕಾರ್ಕಳ: ಕಾರ್ಕಳ ಬಾಹುಬಲಿ ಮಹಾಮಸ್ತಕಾಭೀಷೇಕವು ಕಾರ್ಕಳದ ಇತಿಹಾಸ ಹಾಗೂ ಸಾಂಸ್ಕೃತಿಕ ಮಹತ್ವವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಮಹತ್ವದ ಮಹೋತ್ಸವವಾಗಿದೆ. ಮಹೋತ್ಸವದ ಸಮಯದಲ್ಲಿ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ, ಕಾರ್ಕಳದ ಪ್ರಮುಖ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು, ವಿದ್ಯುತ್, ಶೌಚಾಲಯ, ಪಾರ್ಕಿಂಗ್ ಸೇರಿದಂತೆ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಗೆ ಸುಮಾರು 70 ಕೋಟಿ ರು. ಮೊತ್ತದ ಸಮಗ್ರ ಯೋಜನೆ ಸಿದ್ಧಪಡಿಸಲಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

2027ರಲ್ಲಿ ನಡೆಯಲಿರುವ ಕಾರ್ಕಳದ ಇತಿಹಾಸ ಪ್ರಸಿದ್ಧ ಬಾಹುಬಲಿ ಮಹಾಮಸ್ತಕಾಭೀಷೇಕ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ, ಜೈನ ಸಮುದಾಯದ ವತಿಯಿಂದ ಸೋಮವಾರ ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.ಈ ಯೋಜನೆಗೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗುವುದು. ಅಲ್ಲದೆ, ಜೈನ ಮಠದ ಯಾತ್ರಿ ನಿವಾಸದ ದುರಸ್ತಿಗೆ ಸುಮಾರು 40 ಲಕ್ಷ ರು. ಅನುದಾನದ ಅಗತ್ಯವಿದ್ದು, ಈ ಕಾರ್ಯವೂ ತ್ವರಿತವಾಗಿ ಪೂರ್ಣಗೊಳ್ಳಬೇಕು ಎಂದು ಹೇಳಿದರು.

ಮಹೋತ್ಸವದ ಯಶಸ್ಸಿಗಾಗಿ ಈಗಾಗಲೇ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಹಿಳಾ ಸ್ವಯಂಸೇವಕರ ಸಮಿತಿ ರಚನೆಗೆ ಸೂಚನೆ ನೀಡಿದರು.ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮಹಾಮಸ್ತಕಾಭೀಷೇಕ ಮಹೋತ್ಸವವನ್ನು ಅತ್ಯಂತ ಭವ್ಯ ಹಾಗೂ ಸುವ್ಯವಸ್ಥಿತವಾಗಿ ಆಯೋಜಿಸಬೇಕು. ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವಂತೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಅನಂತರಾಜ್ ಪೂವಣಿ, ಪುಷ್ಪರಾಜ ಜೈನ್, ಸಂಪತ್ ಸಾಮ್ರಾಜ್ಯ ಶಿರ್ತಾಡಿ, ರತ್ನಾಕರ ರಾಜ್ ಅರಸು, ಜೀವಂಧರ್ ಬಳ್ಳಾಲ್, ಸೂರಜ್ ಕುಮಾರ್, ಶಿವಪ್ರಸಾದ್ ಅಜಿಲ, ಬ್ರಹ್ಮದೇವ ಕಲಶ, ಅಜಿತ್ ಕೊಕ್ರಾಡಿ, ಮೋಹನ್ ಪಡಿವಾಳ ಮತ್ತಿತರರಿದ್ದರು.