ಹೆಬ್ರಿ ತಾಲೂಕಿನ ಮುನಿಯಾಲು ಸಂಜೀವಿನಿ ಫಾರ್ಮ್‌ ಗೋಧಾಮದ ನಾಗಬನದಲ್ಲಿ ಫೆ. 19ರಿಂದ 21ರವರೆಗೆ ನಡೆಯಲಿರುವ ಏಕ ಪವಿತ್ರ ಶ್ರೀಮನ್ನಾಗಮಂಡಲದ ಅಂಗವಾಗಿ ಆಯೋಜಿಸಲಾದ ಸಮಾಲೋಚನಾ ಸಭೆ

ಕಾರ್ಕಳ: ಮುನಿಯಾಲಿನ ಸಂಜೀವಿನಿ ಫಾರ್ಮ್‌ ಗೋಧಾಮವನ್ನು ವೀಕ್ಷಿಸಿ ಅಪಾರ ಸಂತೋಷವಾಯಿತು. ಪ್ರಕೃತಿ ಆರಾಧನೆಯೊಂದಿಗೆ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದಕ್ಕೆ ಗೋಧಾಮವೇ ಜೀವಂತ ಉದಾಹರಣೆ ಎಂದು ಕಟಪಾಡಿ ಶ್ರೀ ಆನೆಗುಂದಿ ಮಹಾ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.ಮಂಗಳವಾರ ಹೆಬ್ರಿ ತಾಲೂಕಿನ ಮುನಿಯಾಲು ಸಂಜೀವಿನಿ ಫಾರ್ಮ್‌ ಗೋಧಾಮದ ನಾಗಬನದಲ್ಲಿ ಫೆ. 19ರಿಂದ 21ರವರೆಗೆ ನಡೆಯಲಿರುವ ಏಕ ಪವಿತ್ರ ಶ್ರೀಮನ್ನಾಗಮಂಡಲದ ಅಂಗವಾಗಿ ಆಯೋಜಿಸಲಾದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಬಹುಮುಖ ಯೋಜನೆಯ ರೂವಾರಿ ಡಾ. ಜಿ. ರಾಮಕೃಷ್ಣ ಆಚಾರ್ ಅವರು ಸರ್ಕಾರ ಮಾಡದಿರುವ ಮಹತ್ವದ ಕಾರ್ಯವನ್ನು ಕೈಗೊಂಡಿದ್ದಾರೆ. ಕೃಷಿಪೀಠ ಪ್ರಶಸ್ತಿ ನೀಡುವ ಮೂಲಕ ರೈತರಿಗೆ ಗೌರವ ಸಲ್ಲಿಸುವ ಅವರ ಪ್ರಯತ್ನ ಶ್ಲಾಘನೀಯ. ಎಲ್ಲರ ಸಹಕಾರದಿಂದ ಮಾತ್ರ ಇಂತಹ ಮಹಾನ್ ಕಾರ್ಯಗಳು ಯಶಸ್ವಿಯಾಗಲು ಸಾಧ್ಯ ಎಂದು ಶ್ರೀಗಳು ಹೇಳಿದರು.

ಮುನಿಯಾಲು ಸಂಜೀವಿನಿ ಫಾರ್ಮ್‌ ಗೋಧಾಮದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಮಾತನಾಡಿ, ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ಭಕ್ತಿ ಭಾವಪೂರ್ಣವಾಗಿ ‘ಪ್ರಕೃತಿಯಿಂದ ಪ್ರಕೃತಿಗೆ’ ಎಂಬ ಪರಿಕಲ್ಪನೆಯೊಂದಿಗೆ ಏಕಪವಿತ್ರ ಶ್ರೀಮನ್ನಾಗಮಂಡಲವನ್ನು ಗೋಧಾಮದಲ್ಲಿ ಅಭೂತಪೂರ್ವವಾಗಿ ಆಯೋಜಿಸಲಾಗುತ್ತಿದೆ ಎಂದರು.

ಏಕ ಪವಿತ್ರ ಶ್ರೀಮನ್ನಾಗಮಂಡಲದ ಪ್ರಧಾನ ಕಾರ್‍ಯದರ್ಶಿ ಶ್ರೀಕಾಂತ್ ಶೆಟ್ಟಿ (ಕಾರ್ಕಳ) ಮಾತನಾಡಿ, ಕೃಷಿ ಮತ್ತು ಪ್ರಕೃತಿಗೆ ಅವಿಭಾಜ್ಯ ಸಂಬಂಧವಿದೆ. ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ, ಪ್ರಾಚೀನ ಹಾಗೂ ಪಾರಂಪರಿಕ ಹಿನ್ನೆಲೆಯೊಂದಿಗೆ ಗೋಧಾಮದಲ್ಲಿ ನಾಗಮಂಡಲವನ್ನು ಆಯೋಜಿಸಲಾಗಿದೆ. ಈ ಮಹಾನ್ ಪವಿತ್ರ ಕಾರ್‍ಯವನ್ನು ಡಾ. ಜಿ. ರಾಮಕೃಷ್ಣ ಆಚಾರ್ ಅವರು ತಪಸ್ಸಿನಂತೆ ಕಾರ್‍ಯರೂಪಕ್ಕೆ ತರುತ್ತಿದ್ದಾರೆ ಎಂದು ಹೇಳಿದರು.ವಿಶ್ವಕರ್ಮ ಸಮಾಜದ ಪ್ರಮುಖರಾದ ಶ್ರೀಧರ ಆಚಾರ್ಯ ಮಾತನಾಡಿ, ನಾಗಮಂಡಲದಂತಹ ಪುಣ್ಯಕಾರ್‍ಯವನ್ನು ಡಾ. ಜಿ. ರಾಮಕೃಷ್ಣ ಆಚಾರ್ ಅವರು ಕೈಗೊಂಡಿರುವುದು ನಮ್ಮ ಸಮುದಾಯಕ್ಕೆ ಹೆಮ್ಮೆಯ ವಿಷಯ. ಎಲ್ಲರೂ ಸಹಕಾರ ನೀಡಿ ಈ ನೈಸರ್ಗಿಕ ಹಾಗೂ ಪವಿತ್ರ ಕಾರ್‍ಯವನ್ನು ಯಶಸ್ವಿಗೊಳಿಸೋಣ ಎಂದು ಮನವಿ ಮಾಡಿದರು.ಕಾರ್‍ಯಕ್ರಮದಲ್ಲಿ ಮುನಿಯಾಲು ಸಂಜೀವಿನಿ ಫಾರ್ಮ್‌ ಗೋಧಾಮದ ಸಂಸ್ಥಾಪಕ ಡಾ. ರಾಮಕೃಷ್ಣ ಆಚಾರ್, ಟ್ರಸ್ಟಿ ಸವಿತಾ ರಾಮಕೃಷ್ಣ ಆಚಾರ್, ಏಕಪವಿತ್ರ ಶ್ರೀಮನ್ನಾಗಮಂಡಲದ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ (ಮೂಡುಬಿದರೆ), ಪ್ರಧಾನ ಕಾರ್‍ಯದರ್ಶಿ ಶ್ರೀಕಾಂತ್ ಶೆಟ್ಟಿ (ಕಾರ್ಕಳ), ಬಾರ್ಕೂರು ಎನ್.ಆರ್. ದಾಮೋದರ ಶರ್ಮ, ವಿಶ್ವಕರ್ಮ ಸಮಾಜದ ಮುಖಂಡರು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು. ದಾಮೋದರ ಶರ್ಮ ಕಾರ್‍ಯಕ್ರಮ ನಿರೂಪಿಸಿದರು.