ವಿದ್ಯಾಸಂಸ್ಥೆಗೆ ದಾನವಾಗಿ ನೀಡಿದ ಜಾಗ ಯಥಾ ಸ್ಥಿತಿಯಲ್ಲಿರಬೇಕು. ಅನ್ಯ ಕಾರ್ಯಕ್ಕೆ ಬಳಕೆ ಆಗಬಾರದು ಎಂದು ಮಾಜಿ ವಿಧಾನಸಭಾ ಅಧ್ಯಕ್ಷ, ಮಾಜಿ ಶಾಸಕ ಕೆ. ಜಿ. ಬೋಪಯ್ಯ ಒತ್ತಾಯಿಸಿದರು.

ಕನ್ನಡಪ್ರಭವಾರ್ತೆ ನಾಪೋಕ್ಲು

ವಿದ್ಯಾಸಂಸ್ಥೆಗೆ ದಾನವಾಗಿ ನೀಡಿದ ಜಾಗ ಯಥಾ ಸ್ಥಿತಿಯಲ್ಲಿರಬೇಕು. ಅನ್ಯ ಕಾರ್ಯಕ್ಕೆ ಬಳಕೆ ಆಗಬಾರದು ಎಂದು ಮಾಜಿ ವಿಧಾನಸಭಾ ಅಧ್ಯಕ್ಷ, ಮಾಜಿ ಶಾಸಕ ಕೆ. ಜಿ. ಬೋಪಯ್ಯ ಒತ್ತಾಯಿಸಿದರು. ಇಲ್ಲಿಗೆ ಸಮೀಪದ ಚೆರಿಯಪಬುವಿಗೆ ಬುಧವಾರ ಭೇಟಿ ನೀಡಿದ ಬಿಜೆಪಿ ಪಕ್ಷದ ಪ್ರಮುಖರು ನಿರ್ಮಾಣ ಹಂತದಲ್ಲಿರುವ ಶಾದಿ ಮಹಲ್ ಕಟ್ಟಡದ ಸ್ಥಳ ಪರಿಶೀಲನೆ ಮಾಡಿದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಸರ್ಕಾರದಿಂದ ಒಟ್ಟು 47.2 ಎಕರೆ ಸ್ಥಳ ಇಲ್ಲಿಯ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದೆ. ಇಲ್ಲಿ ಪ್ರೌಢಶಾಲೆ, ಪ್ರಥಮ ದರ್ಜೆ ಕಾಲೇಜು, ಅಂಬೇಡ್ಕರ್ ವಸತಿ ಶಾಲೆ ಎಲ್ಲವೂ ಇದ್ದು ಒಟ್ಟು ಜಾಗ ಶಿಕ್ಷಣದ ಉದ್ದೇಶಕ್ಕೆ ಬಳಕೆಯಾಗಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಶಿಕ್ಷಣ ಸಂಸ್ಥೆಗೆ ಮೀಸಲಿಟ್ಟ ಜಾಗವನ್ನು ಶಾದಿ ಮಹಲ್ ನಿರ್ಮಾಣಕ್ಕೆ ಬಳಸುತ್ತಿರುವುದು ಖಂಡನೀಯ. ಶಾಲೆಗೆ ದಾನವಾಗಿ ನೀಡಿದ ಸ್ಥಳ ಶಿಕ್ಷಣದ ಉದ್ದೇಶಕ್ಕೆ ಬಳಕೆಯಾಗಬೇಕು ಇದಕ್ಕೆ ಸಂಪೂರ್ಣ ಭದ್ರತೆ ಮಾಡಿ ಯಾರೂ ಪ್ರವೇಶಿಸಿದಂತೆ ಮಾಡಬೇಕಿದೆ ಎಂದರು.

ಇದು ಪ್ರವಾಹ ಸ್ಥಳ: ಮಾಜಿ ಸಚಿವ ಹಾಗೂ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ ವಿದ್ಯಾರ್ಜನೆಗಾಗಿ ಶಾಲೆಗೆ ದಾನಿಗಳು ನೀಡಿದ ಜಾಗವನ್ನು ಶಾದಿ ಮಾಲಿಗೆ ನೀಡಿರುವುದು ಜಿಲ್ಲೆಯಲ್ಲಿಯೇ ಪ್ರಥಮ. ವಿದ್ಯಾ ಕೇಂದ್ರ ಎಲ್ಲ ಜಾತಿ ಜನಾಂಗದವರು ವಿದ್ಯಾಭ್ಯಾಸವನ್ನು ಮಾಡುವ ಸ್ಥಳವಾಗಿದ್ದು ಇದನ್ನು ಎಲ್ಲರೂ ಸೇರಿ ಉಳಿಸು ಬೆಳೆಸಬೇಕಾಗಿದೆ. ಮಾತ್ರವಲ್ಲದೇ ಇದು ಪ್ರವಾಹದಿಂದ ಮುಳುಗಡೆಯಾಗುವ ಪ್ರದೇಶವಾಗಿದ್ದು ಈ ಸ್ಥಳವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಅಕ್ಷಮ್ಯ. ಇಂತಹ ಕೃತ್ಯಕ್ಕೆ ಅವಕಾಶ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು .

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಶಿಕ್ಷಣ ಸಂಸ್ಥೆಗೆ ಮೀಸಲಾದ ಜಾಗದಲ್ಲಿ ನೂರಾರು ಮರಗಳನ್ನು ನಾಶ ಮಾಡಿದ್ದಾರೆ. ಮರಗಳ ಲೂಟಿಯಾಗಿವೆ. ವಿವಿಧ ಕುಟುಂಬಸ್ಥರು ಉದಾರವಾಗಿ ನಾಡಿನ ಸಮಸ್ತ ಜನತೆಯ ವಿದ್ಯಾಭ್ಯಾಸಕ್ಕಾಗಿ, ಶ್ರೇಯೋಭಿವೃದ್ಧಿಗಾಗಿ ದಾನವಾಗಿ ನೀಡಿದ ಸ್ಥಳದ ಅತಿಕ್ರಮಣವಾಗುತ್ತಿದೆ ಎಂದು ಕಿಡಿ ಕಾರಿದರು. ಬಿಜೆಪಿ ಮುಖಂಡ ಏ ಕೆ ಮಾನು ಮುತ್ತಪ್ಪ ಮಾತನಾಡಿ ಶಾಲಾ ಜಾಗದಲ್ಲಿ ಮಸೀದಿಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಅಧಿಕೃತ ಜಾಗ ನೀಡಿತು. ಸ್ಮಶಾನಕ್ಕಾಗಿ ಅಧಿಕೃತ ಜಾಗ ನೀಡಿತು. ಅಲ್ಪಸಂಖ್ಯಾತರ ತುಷ್ಟಿಕರಣಕ್ಕೆ ಮುಂದಾಗಿರುವ ಹಿಂದಿನ ಕಾಂಗ್ರೆಸ್ ಸರ್ಕಾರ ಶಾಲಾ ಮೇಲುಸ್ತುವಾರಿ ಸಮಿತಿಯ ಗಮನಕ್ಕೆ ತಾರದೆ 62 ಸೆಂಟ್ ಜಾಗವನ್ನು ವಕ್ಫ್ ಬೋರ್ಡಿಗೆ ನೀಡಿದೆ. ಶಾದಿ ಮಹಲ್ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಅಲ್ಪಸಂಖ್ಯಾತರ ಓಲೈಸುವುದಕ್ಕಾಗಿ ಶಾಲಾ ಜಾಗದ ದುರ್ಬಳಕೆ ಆಗುತ್ತಿರುವುದು ಖಂಡನೀಯ. ಚೆರಿಯಪರಂಬುವಿನಲ್ಲಿ ಮಳೆಗಾಲದಲ್ಲಿ ಪ್ರವಾಹ ಉಕ್ಕೇರುತ್ತದೆ. ನದಿಯ ಸಮೀಪ 500 ಮೀಟರ್ ದೂರದವರೆಗೆ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ ಎಲ್ಲ ಆದೇಶಗಳನ್ನು ಉಲ್ಲಂಘಿಸಿ ಶಾದಿ ಮಾಲ್ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ ಎಂದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಳೂರು ಕಿಶೋರ್ ಕುಮಾರ್ ಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲೆ ವಿಶಾಲ ಕುಶಾಲಪ್ಪ ಅವರಿಂದ ನಿರ್ಮಾಣ ಹಂತದಲ್ಲಿರುವ ಶಾದಿ ಮಾಲ್ ಕಟ್ಟಡದ ಕಾಮಗಾರಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಮಡಿಕೇರಿ ನಗರಸಭಾ ಕೌನ್ಸಿಲರ್ ಉಮೇಶ್ ಸುಬ್ರಮಣಿ, ಮಾಜಿ ಅಧ್ಯಕ್ಷ ಅನಿತಾದೇವಯ್ಯ, ಸ್ಥಳದಾನಿಗಳಾದ ಕೀಕಂಡ ರಾಜಮೇದಪ್ಪ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಉದಯಶಂಕರ್ ಎನ್.ಎಸ್. ಉದಯಶಂಕರ್, ಸಮಿತಿಯ ಮಾಜಿ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ತಾಲೂಕು ಬಿಜೆಪಿ ಉಪಾಧ್ಯಕ್ಷ ಪಾಡಿಯಮ್ಮಂಢ ಮನುಮಹೇಶ್, ಕಾರ್ಯದರ್ಶಿ ಪುಕ್ಕಳಡ್ರ ಧನುಜ್, ಬೇತು ಬಿಜೆಪಿ ಬೂತ್ ಅಧ್ಯಕ್ಷ ಚೋಕಿರ ಅಜಿತ್, ಮುಕ್ಕಾಟಿರ ವಿನಯ್ ಸೇರಿದಂತೆ ಇನ್ನಿತರರು, ಉಪಸ್ಥಿತರಿದ್ದರು.