ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಕಾರ್ಕಳದ ಉಮಿಕಲ್ ಬೆಟ್ಟದಲ್ಲಿ ಸ್ಥಾಪಿಲಾಗಿರುವ ಪರಶುರಾಮನ ವಿಗ್ರಹ ಕಂಚಿನದ್ದಲ್ಲ, ಅದು ಹಿತ್ತಾಳೆಯದ್ದು ಎಂದು ತಜ್ಞರು ವರದಿ ನೀಡಿದ್ದಾರೆ. ಇದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ವ್ಯವಸ್ಥಿತ ವಂಚನೆಯಾಗಿದ್ದು, ಅವರು ತಕ್ಷಣ ಕ್ಷೇತ್ರದ ಜನತೆಯ ಕ್ಷಮೆ ಕೇಳಿ, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುನಿಲ್ ಕುಮಾರ್ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಈ ವ್ಯವಸ್ಥಿತವಾದ ಪೂರ್ವಯೋಜಿತ ವಂಚನೆ ಮಾಡಿದ್ದಾರೆ. ಕಂಚಿನ ವಿಗ್ರಹ ನಿರ್ಮಾಣ ಮಾಡಿದ್ದೇವೆ ಎಂದವರು ಕಳೆದೆರಡು ವರ್ಷಗಳಿಂದ ನಿರಂತರ ಸುಳ್ಳು ಹೇಳಿ, ಜನತೆಯ ಧಾರ್ಮಿಕ ನಂಬಿಕೆಗೆ ದ್ರೋಹ ಎಸಗಿದ್ದಾರೆ. ಮತ್ತು ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಇತರ ಸಚಿವರನ್ನು ಕರೆಯಿಸಿ ಈ ನಕಲಿ ವಿಗ್ರಹವನ್ನು ಉದ್ಘಾಟಿಸಿ, ತನ್ನದೇ ಸರ್ಕಾರಕ್ಕೆ ದ್ರೋಹ ಎಸಗಿದ್ದಾರೆ. ಆದ್ದರಿಂದ ಇದು ರಾಜದ್ರೋಹದ ಪ್ರಕರಣವಾಗಿದ್ದು, ಶಾಸಕರು ಇದರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದರು.ತಾವು ಈ ವಿಗ್ರಹವನ್ನು ಪೈಬರ್ ನಿಂದ ಮಾಡಲಾಗಿದೆ ಎಂದು ಆರೋಪಿಸಿದ್ದೆವು, ಈ ಆರೋಪಕ್ಕೆ ನಾವು ಈಗಲೂ ಬದ್ಧರಿದ್ದೇವೆ, ಇವತ್ತಿಗೂ ಉಮಿಕಲ್ ಬೆಟ್ಟದ ಮೇಲಿರುವ ಪರಶುರಾಮನ ವಿಗ್ರಹದ ಸೊಂಟದ ಕೆಳಭಾಗವನ್ನು ಯಾರೂ ಬೇಕಾದರೂ ಪರೀಕ್ಷಿಸಬಹುದು. ಈಗಲೂ ಅದು ಫೈಬರ್ ನಿಂದಲೇ ನಿರ್ಮಿಸಿರುವುದು ಕಂಡುಬರುತ್ತದೆ, ಈ ವಿಗ್ರಹವನ್ನು ಕಂಚಿನಿಂದಲೇ ಮಾಡಿದ್ದೇವೆ ಎಂದು ವಾದಿಸುತ್ತಿದ್ದ ಶಾಸಕರು ಅಲ್ಲಿ ಕಂಚನ್ನು ತೋರಿಸುತ್ತಾರೆಯೇ ಎಂದು ಶುಭದ ರಾವ್ ಸವಾಲು ಹಾಕಿದರು.ಶಾಸಕರು ಮಾಡಿದ ವಂಚನೆಯಿಂದ ಈಗ ಸರ್ಕಾರಿ ಅಧಿಕಾರಿಗಳ ಮೇಲೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಶಾಸಕರ ರಾಜಕೀಯ ಆಟಕ್ಕೆ ಅಧಿಕಾರಿಗಳು ಬಲಿಯಾಗಿದ್ದಾರೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಕಾರ್ಕಳ ಪುರಸಭೆ ಅಧ್ಯಕ್ಷ ಸುಭಿತ್ ಕುಮಾರ್, ಪುರಸಭಾ ಸದಸ್ಯ ವಿವೇಕ್ ಶೆಣೈ, ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ, ಉಡುಪಿ ಯುವ ಕಾಂಗ್ರೆಸ್ ವಕ್ತಾರ ಮಂಜುನಾಥ ಜೋಗಿ ಉಪಸ್ಥಿತರಿದ್ದರು.