ಸಾರಾಂಶ
ಯಕ್ಷರಂಗಾಯಣ ಕಾರ್ಕಳ ಮತ್ತು ಕೋಟಿ ಚೆನ್ನಯ ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ಸಹಯೋಗ ಹಾಗೂ ಸುಸ್ಥಿರ ಪ್ರತಿಷ್ಠಾನ ಬೆಂಗಳೂರು ಪ್ರಸ್ತುತಪಡಿಸಿದ ‘ಸರಸ ವಿರಸ ಸಮರಸ’ ನಾಟಕ ಕಾರ್ಯಕ್ರಮವನ್ನು ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ರಂಗಭೂಮಿಯು ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯನ್ನು ತರಲು ಪ್ರಮುಖ ಪಾತ್ರವಹಿಸುತ್ತದೆ ಎಂದು ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಹೇಳಿದರು.ಅವರು ಶನಿವಾರ ಯಕ್ಷರಂಗಾಯಣ ಕಾರ್ಕಳ ಮತ್ತು ಕೋಟಿ ಚೆನ್ನಯ ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ಸಹಯೋಗ ಹಾಗೂ ಸುಸ್ಥಿರ ಪ್ರತಿಷ್ಠಾನ ಬೆಂಗಳೂರು ಪ್ರಸ್ತುತಪಡಿಸಿದ ‘ಸರಸ ವಿರಸ ಸಮರಸ’ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಆಯಾಯ ಕಾಲಘಟ್ಟದಲ್ಲಿದ್ದಂತಹ ಎಡರು - ತೊಡರುಗಳನ್ನು ಸಮಾಜಕ್ಕೆ ತಿಳಿಸಲು ನಾಟಕಗಳಿಂದ ಸಾಧ್ಯವಾಗಿದ್ದು, ಮನರಂಜನೆಯ ಜೊತೆಗೆ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ನಡೆಸಲು ಸಹಕಾರಿ ಆಗಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ರಂಗಭೂಮಿಯಲ್ಲಿ ತೊಡಗಿಸಿರುವುದರಿಂದ ಹೆಚ್ಚಿನ ಕೌಶಲ್ಯ ಪಡೆಯಲು, ವ್ಯಕ್ತಿತ್ವ ವಿಕಸನ ಹೊಂದಲು, ಜೀವನ ಕೌಶಲ್ಯವನ್ನು ಪಡೆಯಲು ಸಾಧ್ಯ ಎಂದರು.ಅತಿಥಿಯಾಗಿ ಭಾಗವಹಿಸಿದ ಕಾರ್ಕಳ ಉದ್ಯಮಿ ಡಿ.ಆರ್. ರಾಜು ಮಾತನಾಡಿ, ಕಲೆ ಮತ್ತು ನಾಟಕದಲ್ಲಿ ತೊಡಗಿಸಿಕೊಳ್ಳುವುದರಿಂದ ಸೃಜನಶೀಲ ಸುಧಾರಿಸಲು, ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು, ಆತ್ಮವಿಶ್ವಾಸ ಹೆಚ್ಚಿಸಲು ಸಾಧ್ಯವಾಗುವುದು. ಹಾಗಾಗಿ ಶಿಕ್ಷಣದಲ್ಲಿ ಕಲೆ ಮತ್ತು ನಾಟಕವು ಇಂದಿನ ದಿನಗಳಲ್ಲಿ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ಸುಸ್ಥಿರ ಪ್ರತಿಷ್ಠಾನ ಅಧ್ಯಕ್ಷ ಕೆ.ಎಸ್. ರಂಗೇಗೌಡ, ನಾಟಕ ನಿರ್ದೇಶಕ ಜೋಸೆಫ್ ಜಾನ್ ಹಾಗೂ ಕೋಟಿ ಚೆನ್ನಯ ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ಸದಸ್ಯರಾದ ಭರತ್, ರೋಹಿತ್ ಉಪಸ್ಥಿತರಿದ್ದರು.ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಪ್ರಸ್ತಾನೆಗೈದು ಸ್ವಾಗತಿಸಿದರು. ನಿವೃತ್ತ ಶಿಕ್ಷಕ ವಸಂತ ನಿರೂಪಿಸಿದರು. ಥೀಂ ಪಾರ್ಕ್ ಸಿಬ್ಬಂದಿ ಅಭಿಲಾಷ್ ವಂದಿಸಿದರು.