2026-27ನೇ ಶೈಕ್ಷಣಿಕ ವರ್ಷದ ಶಾಲಾ ತರಗತಿಗಳು ಸೋಮವಾರ ಆರಂಭಗೊಂಡಿದ್ದು, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಕಳ: 2026-27ನೇ ಶೈಕ್ಷಣಿಕ ವರ್ಷದ ಶಾಲಾ ತರಗತಿಗಳು ಸೋಮವಾರ ಆರಂಭಗೊಂಡಿದ್ದು, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಆವರಣಗಳನ್ನು ತಳಿರು-ತೋರಣ, ರಂಗೋಲಿ ಹಾಗೂ ಬಣ್ಣ ಬಣ್ಣದ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ಹೊಸದಾಗಿ ಶಾಲೆಗೆ ಆಗಮಿಸಿದ ಪುಟಾಣಿಗಳನ್ನು ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಆತ್ಮೀಯ ಸ್ವಾಗತಿಸಿದರು. ಕಾರ್ಕಳ ವಿಧಾನಸಭಾ ಕ್ಷೇತ್ರದ ನಿಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪದುವಿನಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪೋಷಕರು, ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳನ್ನು ಒಳಗೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿ ಸುಮಾರು 300ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕೆಲವು ಪದವಿಪೂರ್ವ ಕಾಲೇಜುಗಳೂ ಈ ವ್ಯಾಪ್ತಿಗೆ ಸೇರಿವೆ.

ಕಾರ್ಕಳ ಶಿಕ್ಷಣ ಬ್ಲಾಕ್‌ನ ಅಜೆಕಾರು, ಹೆಬ್ರಿ, ನಿಟ್ಟೆ, ಮುನಿಯಾಲು, ಮಿಯ್ಯಾರು, ಬಜಗೋಳಿ, ಹೊಸ್ಮಾರು, ನಂದಳಿಕೆ, ಶಿರ್ಲಾಲು, ಮುದ್ರಾಡಿ, ಶಿವಪುರ, ಕಾಬೆಟ್ಟು, ಮುಂಡ್ಕೂರು, ಜಯಂತಿನಗರ, ಸಾಣೂರು ಹಾಗೂ ಬೈಲೂರು ಸೇರಿದಂತೆ 16 ಶಿಕ್ಷಣ ಕ್ಲಸ್ಟರ್‌ಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸ್ವಾಗತಿಸಿ ಹೊಸ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.