ಭಾನುವಾರ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ವೇದಿಕೆಯಲ್ಲಿ ನಡೆದ ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ನೆರವೇರಿತು.

ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

ಕಾರ್ಕಳ: ಭಾಷೆಯ ಉಳಿವು ಮಾತು, ಬರವಣಿಗೆ ಮತ್ತು ನಿತ್ಯ ಬಳಕೆ ಮೇಲೆ ಅವಲಂಬಿತವಾಗಿದೆ ಎಂದು ನಿಟ್ಟೆ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ನಿರ್ದೇಶಕ ಯೋಗೀಶ್ ಹೆಗ್ಡೆ ಹೇಳಿದರು.ಭಾನುವಾರ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ವೇದಿಕೆಯಲ್ಲಿ ನಡೆದ ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಾದೇಶಿಕ ಭಾಷೆ ತುಳುವಾಗಿದ್ದರೂ ಕನ್ನಡ ಹಾಗೂ ತುಳು ಭಾಷೆಗಳಿಗೆ ಸಮಾನ ಮಹತ್ವವಿದ್ದು, ಎರಡೂ ಭಾಷೆಗಳು ಪರಸ್ಪರ ಪೂರಕವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಭಾಷಾ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ಇದರ ಪರಿಣಾಮವಾಗಿ ಯುವಜನತೆಯಲ್ಲಿ ಓದು ಮತ್ತು ಬರವಣಿಗೆಯ ಆಸಕ್ತಿ ಕುಸಿಯುತ್ತಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು.

ಯುವ ಪೀಳಿಗೆ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಭಾಷೆಯ ಬೆಳವಣಿಗೆಗೆ ಓದು ಅತ್ಯಂತ ಮುಖ್ಯ. ತಂತ್ರಜ್ಞಾನವನ್ನು ಬಳಸಿದರೂ ಭಾಷೆಯ ಮೌಲ್ಯವನ್ನು ಮರೆಯಬಾರದು. ಕನ್ನಡವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಾಗ ಮಾತ್ರ ಅದರ ಉಳಿವು ಸಾಧ್ಯವಾಗುತ್ತದೆ ಎಂದರು.ಸಮಾರೋಪ ಮಾತುಗಳನ್ನಾಡಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವಥ್ ಎಸ್.ಎಲ್., ನಮ್ಮ ಸಮಾಜದಲ್ಲಿ ಓದುಗರ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಪುಸ್ತಕ ಓದುವ ಅಭಿರುಚಿ ಬೆಳೆಸಿದಾಗ ಮಾತ್ರ ಮೌಲ್ಯಯುತ ಹಾಗೂ ಸಂವೇದನಾಶೀಲ ಜೀವನ ನಡೆಸಲು ಸಾಧ್ಯ. ಯುವಜನತೆಯಲ್ಲಿ ಓದಿನ ಆಸಕ್ತಿ ಮೂಡಿಸಲು ಇಂತಹ ಸಾಹಿತ್ಯ ಸಮ್ಮೇಳನಗಳು ಬಹಳ ಸಹಕಾರಿಯಾಗುತ್ತವೆ. ಕನ್ನಡದ ಹಿರಿಮೆ-ಗರಿಮೆಯನ್ನು ಕೊಂಡಾಡುವ ಹಾಗೂ ಉಳಿಸುವ ಕಾರ್ಯ ನಿತ್ಯ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.ಹಿರಿಯ ಸಾಹಿತಿ ಎಚ್. ದುಂಡಿರಾಜ್ ಮಾತನಾಡಿ, ಕನ್ನಡ ಭಾಷೆಯ ಉಳಿವಿಗೆ ನಿವೃತ್ತರು ಹಾಗೂ ಹಿರಿಯರು ಮಾತ್ರ ಕಾಳಜಿ ತೋರಿದರೆ ಸಾಲದು. ಯುವಕರು ಮುನ್ನಡೆದು ಬಂದಾಗಲೇ ಭಾಷೆಗೆ ಜೀವ ಬರುತ್ತದೆ. ಯಾವುದೇ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದರೂ ತಪ್ಪಿಲ್ಲ, ಆದರೆ ಮಾತೃಭಾಷೆಯಾದ ಕನ್ನಡವನ್ನು ಪ್ರೀತಿಸಿ ಬಳಸಿದಾಗ ಮಾತ್ರ ಭಾಷೆ ಉಳಿಯಲು ಸಾಧ್ಯ. ಭಾಷೆಯ ಮೇಲೆ ಅಭಿಮಾನ ಇದ್ದಾಗ ಸಂಸ್ಕೃತಿ ಸಹ ಉಳಿಯುತ್ತದೆ ಎಂದರು.ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು. ಅಜೆಕಾರು ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ರಿಷಿಕ ದೇವಾಡಿಗ ಅವರಿಗೆ ವಿದ್ಯಾರ್ಥಿ ಯುವ ಸಾಹಿತ್ಯ ರತ್ನ ಪ್ರಶಸ್ತಿ, ದಿ. ಗೋಪಾಲ ಭಂಡಾರಿ ಸ್ಮರಣಾರ್ಥ ಕಾಂತಾವರ ಕನ್ನಡ ಸಂಘಕ್ಕೆ ಸೃಜನ ಸಾಹಿತ್ಯ ಸೌರಭ ಪ್ರಶಸ್ತಿ, ಡಾ. ರವೀಂದ್ರ ಶೆಟ್ಟಿ ಬಜಗೋಳಿ ಅವರ ಪ್ರಾಯೋಜಕತ್ವದಲ್ಲಿ ದುರ್ಗ ತೆಳ್ಳಾರಿನ ಮಂಜುನಾಥ್ ಪೈ ಸರ್ಕಾರಿ ಶಾಲೆಗೆ ಕನ್ನಡ ಸೇವೆಗಾಗಿ ಕರುನಾಡ ಸಿರಿ ಪ್ರಶಸ್ತಿ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಧರಣೇಂದ್ರ ಕುಮಾರ್ ಸಿ. ಅವರಿಗೆ ಪುಸ್ತಕ ಪರಿಚಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಸಿದ್ದಾಪುರ ವಾಸುದೇವ ಭಟ್ಟ ಅವರು ಸಮಾರೋಪ ಪ್ರತಿಸ್ಪಂದನೆ ನೀಡಿದರು. ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಗಣನಾಥ್ ಶೆಟ್ಟಿ ಬಿ., ಅಮೃತ್ ರೈ, ಆದರ್ಶ ಎಂ.ಕೆ., ವಿಮಲ್ ರಾಜ್, ಗಣಪತಿ ಕೆ.ಎಸ್., ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧಿಕಾರಿ ಮನೋಹರ ಪಿ.ವಿ., ಆನಂದ ಸಾಲಿಗ್ರಾಮ ಉಪಸ್ಥಿತರಿದ್ದರು.

ಉಪನ್ಯಾಸಕ ಲೋಹಿತ್ ಎಸ್.ಕೆ. ಸ್ವಾಗತಿಸಿದರು. ನಾಗೇಶ್ ನಲ್ಲೂರು ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ಕಾರ್ಯದರ್ಶಿ ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ನಾಯ್ಕ್ ವಂದಿಸಿದರು.ಅನುಪಮಾ ಚಿಪ್ಳೂಣ್ಕರ್ (ಸಾಹಿತ್ಯ), ದಿವಾಕರ್ ಶೆಟ್ಟಿ ಗುಂಡ್ಯಡ್ಕ (ಶಿಕ್ಷಣ), ಪ್ರಕಾಶ್ ರಾವ್ (ಸಮಾಜ ಸೇವೆ), ರವಿ ನಲ್ಕೆ ಬೋಳ (ದೈವಾರಾಧನೆ), ರಿಜ್ವಾನ್ ಖಾನ್ (ಸಮಾಜ ಸೇವೆ), ಸುನಿಲ್ ಕುಮಾರ್ (ನ್ಯಾಯಾಂಗ), ಹೆನ್ರಿ ಸಾಂತ್‌ಮಯೋರ್ (ಸಮಾಜ ಸೇವೆ), ಶ್ರೀಧರ್ ಸನಿಲ್ ಪೊಸ್ರಾಲು (ಕೃಷಿ), ಕೆ. ಮಾಧವ (ಸಮಾಜ ಸೇವೆ) ಅವರನ್ನು ವಿವಿಧ ಕ್ಷೇತ್ರಗಳ ಸಾಧನೆಗಾಗಿ ಗೌರವಿಸಲಾಯಿತು.