ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅತಿಯಾದ ಬಿಸಿಲಿನ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಇರುವುದರಿಂದ ಪ್ರವಾಸಿಗರ ಸಂಚಾರ ಹೆಚ್ಚಿರುತ್ತದೆ. ಉತ್ತಮ ಶಿಕ್ಷಣ ಸಂಸ್ಥೆಗಳು ಇರುವ ಕಾರ್ಕಳ ಭಾಗಕ್ಕೆ ವಿವಿಧ ಜಿಲ್ಲೆಗಳಿಂದ ಕುಟುಂಬ ಸಮೇತವಾಗಿ ಜನರು ಭೇಟಿ ನೀಡುವುದು ರೂಢಿಯಾಗಿದ್ದರೂ, ಈ ಬಾರಿ ಪರಿಸ್ಥಿತಿ ಬದಲಾಗಿದೆ.

ಕಾರ್ಕಳ ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳಾದ ಗೊಮ್ಮಟೇಶ್ವರ ಬೆಟ್ಟ, ಚತುರ್ಮುಖ ಬಸದಿ, ಆನೆಕೆರೆ ಬಸದಿ ಹಾಗೂ ಹೆಬ್ರಿ ತಾಲೂಕಿನ ವರಂಗ ಕೆರೆ ಬಸದಿಗಳಲ್ಲಿ ಕಳೆದ ವರ್ಷದೊಂದಿಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆಯಲ್ಲಿ ಸುಮಾರು ಶೇ.20 ಕುಸಿತ ದಾಖಲಾಗಿದೆ.

ದಿನನಿತ್ಯ ಉಷ್ಣಾಂಶವು 38 ಡಿಗ್ರಿ ಸೆಲ್ಸಿಯಸ್‌ಗೂ ಮೀರಿರುವುದರಿಂದ ಪ್ರವಾಸಿಗರು ಹೊರಾಂಗಣ ಪ್ರವಾಸ ತಪ್ಪಿಸುತ್ತಿದ್ದಾರೆ. ವಿಶೇಷವಾಗಿ ಮಧ್ಯಾಹ್ನ ವೇಳೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಈ ತಾಣಗಳು ಬಹುತೇಕ ಖಾಲಿ ಖಾಲಿ ಕಾಣುತ್ತಿವೆ.


ಕಾರ್ಕಳ ಹೆಬ್ರಿ ಗೆ ಭೇಟಿ ನೀಡುವವರಲ್ಲಿ ಮಹರಾಷ್ಟ್ರ , ಕೇರಳ, ತಮಿಳುನಾಡು ಬೆಂಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರವಾಸಿಗರೇ ಹೆಚ್ಚಿನವರು. ಆದರೆ ಈ ಬಾರಿ ಬಿಸಿಲಿನ ತೀವ್ರತೆಯಿಂದಾಗಿ ದೂರ ಪ್ರಯಾಣಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮವಾಗಿ ಪ್ರವಾಸೋದ್ಯಮದ ಚಟುವಟಿಕೆಗಳಲ್ಲಿ ನಿಧಾನತೆ ಕಂಡುಬಂದಿದೆ.

ಇದಕ್ಕೆ ವಿರುದ್ಧವಾಗಿ, ತಂಪು ವಾತಾವರಣ ಹೊಂದಿರುವ ಪ್ರಕೃತಿ ತಾಣಗಳು ಮಾತ್ರ ಪ್ರವಾಸಿಗರನ್ನು ಸೆಳೆಯುತ್ತಿವೆ. ಹೆಬ್ರಿ ತಾಲೂಕಿನ ಕೂಡ್ಲು ತೀರ್ಥ (ಕೂಡ್ಲು ಫಾಲ್ಸ್) ನಲ್ಲಿ ವಾರಾಂತ್ಯಗಳಲ್ಲಿ ದಿನಕ್ಕೆ 500ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿರುವುದು ಗಮನಾರ್ಹವಾಗಿದೆ. ತಂಪಾದ ನೀರು ಮತ್ತು ಹಸಿರು ಪರಿಸರದ ನಡುವೆ ವಿಶ್ರಾಂತಿ ಪಡೆಯಲು ಜನರು ಈ ಸ್ಥಳವನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ.

ಕಳೆದ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ವಾತಾವರಣ ತಂಪಾಗಿದ್ದು, ತೀರ್ಥ ಕ್ಷೇತ್ರಗಳು ಸೇರಿದಂತೆ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು.

ಆ ಸಮಯದಲ್ಲಿ ಸ್ಥಳೀಯ ಅಂಗಡಿಗಳು, ಹೋಟೆಲ್‌ಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಉತ್ತಮ ಆದಾಯ ಲಭಿಸಿತ್ತು. ಆದರೆ ಈ ಬಾರಿ ಮಳೆಯ ಕೊರತೆ ಹಾಗೂ ಹೆಚ್ಚಿದ ಉಷ್ಣಾಂಶದಿಂದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.

ಪ್ರವಾಸಿಗರ ಸಂಖ್ಯೆ ಕುಸಿತದಿಂದ ಸ್ಥಳೀಯ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಣ್ಣ ಅಂಗಡಿಗಳು, ಹೋಟೆಲ್‌ಗಳಿಗೆ ಹೊಂ ಸ್ಟೇ ಆದಾಯದಲ್ಲಿ ಇಳಿಕೆ ಕಂಡುಬರುತ್ತಿದೆ.

ಬಿಸಿಲಿನ ತೀವ್ರತೆಯಿಂದ ತಂಪು ಪಾನೀಯಗಳು, ಜ್ಯೂಸ್‌ಗಳು, ಐಸ್‌ಕ್ರೀಮ್ ಹಾಗೂ ಕುಡಿಯುವ ನೀರಿಗೆ ಹೆಚ್ಚಿನ ಬೇಡಿಕೆ ಇದೆ. ಜನರು ಬಿಸಿಯಿಂದ ರಕ್ಷಣೆ ಪಡೆಯಲು ಇಂತಹ ವಸ್ತುಗಳತ್ತ ಮುಖ ಮಾಡುತ್ತಿದ್ದಾರೆ.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶಗಳು ಪ್ರಕಟವಾದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಚಟುವಟಿಕೆಗಳು ಹೆಚ್ಚಾಗಿರುವುದು ಸಹ ಪ್ರವಾಸಿಗರ ಸಂಖ್ಯೆಗೆ ಪ್ರಭಾವ ಬೀರಿದೆ. ಜೊತೆಗೆ ಕರಾವಳಿ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಆರ್ದ್ರತೆ ಹ್ಯೂಮಿಡಿಟಿ ಕೂಡ ಬಿಸಿಯ ಅನುಭವವನ್ನು ಹೆಚ್ಚಿಸಿ ಜನರನ್ನು ಹೊರಗೆ ಹೋಗುವುದರಿಂದ ತಡೆಯುತ್ತಿದೆ. ಜೂನ್ ನಂತರ ಕರಾವಳಿಯ ಮಳೆಗೆ ಪ್ರವಾಸಿಗರು ಕೂಡ ಕಡಿಮೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಕೊರತೆಯಿಂದ ಸ್ಥಳೀಯ ಅಂಗಡಿಗಳಿಗೆ ಅದಾಯದಲ್ಲಿ ಕುಸಿತವಾದಂತಾಗಿದೆ.

ಈ ಬಾರಿ ಬಿಸಿಲು ತುಂಬಾ ಜಾಸ್ತಿ ಇರುವುದರಿಂದ ಪ್ರವಾಸಿಗರು ಕಡಿಮೆಯಾಗಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ನಮ್ಮ ಅಂಗಡಿಗೆ ಒಳ್ಳೆಯ ವ್ಯವಹಾರವಾಗುತ್ತಿತ್ತು, ಆದರೆ ಈಗ ಮಾರಾಟದಲ್ಲಿ ಸ್ಪಷ್ಟವಾಗಿ ಇಳಿಕೆ ಕಂಡುಬರುತ್ತಿದೆ. ದಿನಕ್ಕೆ ಬರುತ್ತಿದ್ದ ಗ್ರಾಹಕರ ಸಂಖ್ಯೆ ಅರ್ಧಕ್ಕಿಂತ ಕಡಿಮೆಯಾಗಿದೆ. ಹೋಟೆಲ್‌, ಹೋಂಸ್ಟೇ ಮತ್ತು ಸಣ್ಣ ವ್ಯಾಪಾರಿಗಳಿಗೂ ಇದೇ ಪರಿಸ್ಥಿತಿ. ಹೀಗೆ ಮುಂದುವರಿದರೆ ನಮ್ಮಂತಹ ಸಣ್ಣ ವ್ಯಾಪಾರಿಗಳಿಗೆ ಸಂಕಷ್ಟ ಇನ್ನಷ್ಟು ಹೆಚ್ಚಾಗುವ ಭೀತಿ ಇದೆ.

ಸುರೇಶ್ ಕುಲಾಲ್, ಅಂಗಡಿ ಮಾಲಿಕರು ಕಾರ್ಕಳ