ಸಾರಾಂಶ
ಕಾರ್ಕಳ ಎಂಪಿಎಂ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಸಾಲಿನ ಉಡುಪಿ ವಲಯದ ಪುರುಷರ ಕಬಡ್ಡಿ ಪಂದ್ಯಾವಳಿ ಬುಧವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಎಂಪಿಎಂ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಸಾಲಿನ ಉಡುಪಿ ವಲಯದ ಪುರುಷರ ಕಬಡ್ಡಿ ಪಂದ್ಯಾವಳಿ ಬುಧವಾರ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಕಳ ಎಂಪಿಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಶ್ರೀವರ್ಮ ಅಜ್ರಿ ಮಾತನಾಡಿ, ಸರ್ಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಂತೆ ಸಶಕ್ತವಾಗಿ ಕ್ರೀಡಾಕೂಟ ನಡೆಸುವಲ್ಲಿ ಯಶಸ್ವಿಯಾಗಿದೆ. ಅನುಭವವೇ ಗೆಲುವು, ಕ್ರೀಡೆಯಿಂದ ಮನೋಲ್ಲಾಸ ದೈಹಿಕ ಸದೃಢತೆ ಸಾಧ್ಯ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ ಮಾತನಾಡಿ, ಗೆಲುವಿಗಾಗಿ ಮಾತ್ರವಲ್ಲದೆ ಸಂತೋಷಕ್ಕಾಗಿ ಕೂಡ ಕ್ರೀಡೆಯನ್ನು ಆಡಬೇಕು. ಇದರಿಂದ ದೈಹಿಕ ಚೈತನ್ಯ ಸಿಗುತ್ತದೆ. ವಿಶ್ವವಿದ್ಯಾನಿಲಯ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಲೇ ಬಂದಿದೆ ಎಂದು ಹೇಳಿದರು.ಕಾಲೇಜಿನ ಹಳೆವಿದ್ಯಾರ್ಥಿ ಸಂಘ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಆಚಾರ್ಯ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ರೈ ಕೆ. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾ ನಿರೀಕ್ಷಕರು, ಉಡುಪಿ ಅಜ್ಜರಕಾಡು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಪಾಟ್ಕರ್, ತೆಂಕನಿಡಿಯೂರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಅಕ್ಷತಾ ರಾವ್ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಂಕಾಂ ವಿಭಾಗದ ಪ್ರಾಧ್ಯಾಪಕ ಅವಿನಾಶ್ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಯಬಾರತಿ ಎ. ವಂದಿಸಿದರು.