ಮೊದಲ ಯತ್ನದಲ್ಲೇ ಐಎಎಸ್‌ ಪಾಸ್‌ ಮಾಡಿದ ಕಾರ್ಕಳದ ಯುವಕ

| Published : Apr 27 2025, 01:45 AM IST

ಮೊದಲ ಯತ್ನದಲ್ಲೇ ಐಎಎಸ್‌ ಪಾಸ್‌ ಮಾಡಿದ ಕಾರ್ಕಳದ ಯುವಕ
Share this Article
  • FB
  • TW
  • Linkdin
  • Email

ಸಾರಾಂಶ

ಶೌಕತ್ ಅಜೀಂ, ಪ್ರಾಥಮಿಕ ಶಿಕ್ಷಣವನ್ನು ಕಾರ್ಕಳ ಉರ್ದು ಹಾಗೂ ವೆಂಕಟರಮಣ ಶಾಲೆಯಲ್ಲಿ ಮುಗಿಸಿ, ಬಳಿಕ ಹೈಸ್ಕೂಲ್ ಶಿಕ್ಷಣವನ್ನು ಭುವನೇಂದ್ರ ಹೈಸ್ಕೂಲ್‌ನಲ್ಲಿ, ಪಿಯುಸಿ ಶಿಕ್ಷಣವನ್ನು ಕೆಎಂಇಎಸ್‌ನಲ್ಲಿ, ಮೂಡುಬಿದಿರೆಯ ಮೈಟ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಶನ್‌ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದಾರೆ.

ಹೆತ್ತವರ ಕನಸು ನನಸು ಮಾಡಿದ ಮೊಹಮ್ಮದ್ ಶೌಕತ್ ಅಜೀಂ । 345ನೇ ರ್‍ಯಾಂಕ್‌ ಪಡೆದು ಸಾಧನೆ

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ತಂದೆ ತಾಯಿಯ ಆಸೆ ಈಡೇರಿಸುವುದು ಪ್ರತಿಯೊಬ್ಬ ಮಕ್ಕಳ ಕನಸಾಗಿರುತ್ತದೆ. ಆದರೆ ಕಾರ್ಕಳದ ಯುವಕ ತನ್ನ ಹೆತ್ತವರು ತಾನು ಐಎಎಸ್‌ ಅಧಿಕಾರಿಯಾಗಿ ಜನ ಸೇವೆ ಮಾಡಬೇಕೆಂದು ಆಸೆ ಪಟ್ಟಿದ್ದನ್ನು ಸವಾಲಾಗಿ ಸ್ವೀಕರಿಸಿ ಮೊದಲ ಯತ್ನದಲ್ಲೇ ಐಎಎಸ್‌ ಪರೀಕ್ಷೆಯನ್ನು ಪಾಸ್‌ ಮಾಡಿ ಮಾದರಿಯಾಗಿದ್ದಾರೆ. ಅದರಲ್ಲೂ 345ನೇ ರ್‍ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ.

ಹೌದು, ಕಾರ್ಕಳದ ಸಾಲ್ಮರದ ಜರಿಗುಡ್ಡೆಯ 31 ವರ್ಷದ ಮೊಹಮ್ಮದ್ ಶೌಕತ್ ಅಜೀಂ ಈ ಸಾಧಕ.

ಬಡ ಕುಟುಂಬ:

ತಂದೆ ಶೇಕ್ ಅಬ್ದುಲ್ ಕಾರ್ಕಳದ ಖಾಸಗಿ ಲಾರಿಯಲ್ಲಿ ಡ್ರೈವರ್ ಅಗಿ ಕೆಲಸ ಮಾಡುತ್ತಿದ್ದರೆ, ತಾಯಿ ಮೈಮುನ ಗೃಹಿಣಿಯಾಗಿದ್ದಾರೆ. ಈ ದಂಪತಿಯ ಮಗನಾಗಿರುವ ಶೌಕತ್ ಅಜೀಂ ಬಡತನದಲ್ಲಿಯೇ ಬೆಳೆದಿದ್ದ. ತಂದೆ, ತಾಯಿ ತನ್ನ ಮಗ ಐಎಎಸ್ ಬರೆದು ಜನ ಸೇವೆ ಮಾಡಬೇಕು ಎಂದು ಕನಸು ಕಾಣುತಿದ್ದರು. ಮಗನಿಗೆ ಸಾಲ ಮಾಡಿ ಶಿಕ್ಷಣವನ್ನೂ ನೀಡಿದ್ದರು. ತನ್ನ ತಂದೆ ತಾಯಿಯ ಕನಸನ್ನು ನನಸು ಮಾಡುವ ಸಲುವಾಗಿ 2022ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 545 ರ್‍ಯಾಂಕ್‌ ಪಡೆದು ಪಾಸಾಗಿದ್ದರು. ಬಳಿಕ ಪುಣೆಯ ಇಂಡಿಯನ್ ಡಿಫೆನ್ಸ್ ಅಕೌಂಟ್ಸ್ ಸರ್ವಿಸ್‌ನಲ್ಲಿ ಎರಡು ವರ್ಷ ಕರ್ತವ್ಯ ಸಲ್ಲಿಸಿದ್ದಾರೆ.

ನಿತ್ಯ ಎಂಟು ಗಂಟೆ ಓದು:

ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ಕಾರ್ಕಳದ ಗಾಂಧಿ ಮೈದಾನದ ಗ್ರಂಥಾಲಯದಲ್ಲಿ ನಿತ್ಯ ಓದು ಶೌಕತ್ ಅಜೀಂ ಅವರ ಯಶಸ್ಸಿಗೆ ಸಹಕಾರಿಯಾಗಿತ್ತು.

ಪುಣೆಯ ಇಂಡಿಯನ್ ಡಿಫೆನ್ಸ್ ಅಕೌಂಟ್ಸ್ ಸರ್ವಿಸ್‌ನಲ್ಲಿ ಎರಡು ವರ್ಷ ಕರ್ತವ್ಯ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ನಿತ್ಯ ಎಂಟು ಗಂಟೆ ಓದುತ್ತಿದ್ದರು. ಛಲಬಿಡದೆ ಓದಿದ ಪರಿಣಾಮ ಐಎಎಸ್ ರ್‍ಯಾಂಕ್ ಪಡೆದು ಉಡುಪಿ ಜಿಲ್ಲೆಯಲ್ಲೇ ಹೆಸರುಗಳಿಸಿದ್ದಾರೆ.

ಶಿಕ್ಷಣ:

ಶೌಕತ್ ಅಜೀಂ, ಪ್ರಾಥಮಿಕ ಶಿಕ್ಷಣವನ್ನು ಕಾರ್ಕಳ ಉರ್ದು ಹಾಗೂ ವೆಂಕಟರಮಣ ಶಾಲೆಯಲ್ಲಿ ಮುಗಿಸಿ, ಬಳಿಕ ಹೈಸ್ಕೂಲ್ ಶಿಕ್ಷಣವನ್ನು ಭುವನೇಂದ್ರ ಹೈಸ್ಕೂಲ್‌ನಲ್ಲಿ, ಪಿಯುಸಿ ಶಿಕ್ಷಣವನ್ನು ಕೆಎಂಇಎಸ್‌ನಲ್ಲಿ, ಮೂಡುಬಿದಿರೆಯ ಮೈಟ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಶನ್‌ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದಾರೆ.----------------ತಂದೆ ತಾಯಿಯ ಕನಸನ್ನು ನನಸು ಮಾಡುವುದೇ ನನ್ನ ಉದ್ದೇಶವಾಗಿದೆ. ನಿತ್ಯ ಎಂಟು ಗಂಟೆಯ ಓದು ನನಗೆ ಫಲ ನೀಡಿತು‌. ಕರ್ನಾಟಕದಲ್ಲೇ ಸೇವೆ ಸಲ್ಲಿಸಬೇಕೆಂಬ ಕನಸಿದೆ. ಇನ್ನೂ ಎರಡು ವರ್ಷ ಮಸ್ಸೂರಿ ಲಾಲ್ ಬಹದ್ದೂರು ಶಾಸ್ತ್ರಿ ಐಎಎಸ್ ಟ್ರೈನಿಂಗ್ ಸೆಂಟರ್‌ನಲ್ಲಿ ತರಬೇತಿ ನಡೆಯಲಿದೆ.

। ಶೌಕತ್ ಅಜೀಂ, ಐಎಎಸ್ ರ್‍ಯಾಂಕ್ ಪಡೆದವರು

-----------

ನನ್ನ ಮಗನ ಸಾಧನೆಯಿಂದ ನನಗೆ ಹೆಮ್ಮೆಯಾಗಿದೆ. ನನ್ನ ಮಗ ಐಎಎಸ್ ಪಾಸಾಗುವುದು ನಮ್ಮ ಕನಸಾಗಿತ್ತು. ಮಗನ ಶಿಕ್ಷಣಕ್ಕೆ ಒತ್ತು ನೀಡಿದ್ದೆವು. ಆತನ ಶಿಕ್ಷಣಕ್ಕೆ ನಿತ್ಯ ಪ್ರೋತ್ಸಾಹ ನೀಡುತಿದ್ದೆವು.

। ಶೇಕ್ ಅಬ್ದುಲ್, ಶೌಕತ್ ಅಜೀಂ ತಂದೆ