ನಿಷ್ಠೆ, ಪ್ರಾಮಾಣಿಕತೆಯಿಂದ ಮೇರು ಸ್ಥಾನದಲ್ಲಿ ನಿಲ್ಲುವ ಕರ್ಣ: ಭಜಂತ್ರಿ

| Published : Feb 04 2025, 12:31 AM IST

ಸಾರಾಂಶ

ಪಂಪ ಭಾರತಕಾವ್ಯ ನಿತ್ಯ ಹೊಸದಾಗಿರುವಂತಹದ್ದು. ಒಂದೊಂದು ಸಲದ ಓದಿಗೂ ಒಂದೊಂದು ರೀತಿಯ ಅರ್ಥವನ್ನು ಸ್ಪುರಿಸುವಂತಹದ್ದು. ಮತ್ತೆ, ಮತ್ತೆ ಈ ಕಾವ್ಯ ಓದಬೇಕೆಂಬ ಮನೋಭೂಮಿಕೆಯನ್ನು ನಿರ್ಮಿಸುವಂತಹದ್ದು.

ಧಾರವಾಡ:

ಆದಿಕವಿ ಪಂಪ ''''ಪಂಪ'''' ಭಾರತದಲ್ಲಿ ಬರುವ ಕರ್ಣನ ಪಾತ್ರದ ಚಿತ್ರೀಕರಣವನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾನೆ. ‘ನೆನೆವಡೆ ಒಂದೇ ಚಿತ್ತದಿಂದ ಕರ್ಣನಂ ನೆನೆ’ಎಂದು ಹೇಳುವಾಗ ಕರ್ಣ ದುರಂತದ ಪಾತ್ರವಾದರೂ ಕೂಡಾ ಅವನ ನಿಷ್ಠೆ, ಪ್ರಾಮಾಣಿಕತೆಯ ದೃಷ್ಟಿಯಿಂದ ಮೇರು ಸ್ಥಾನದಲ್ಲಿ ನಿಲ್ಲುತ್ತಾನೆ ಎಂದು ಪ್ರಾಧ್ಯಾಪಕ ಡಾ. ವೈ.ಎಂ. ಭಜಂತ್ರಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಡಾ. ಶಿವಾನಂದ ಶಾಂತಪ್ಪ ಗಾಳಿ ದತ್ತಿ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.‘ಕರ್ಣ ರಸಾಯನ ಮಲ್ತೆ ಭಾರತಂ” ಎಂದು ಹೇಳುವಾಗ ಪಂಪ ಒಬ್ಬರ ಸಾಯನತಜ್ಞನಾಗಿ, ಮನೋವಿಜ್ಞಾನಿಯಾಗಿ ಕಾಣುತ್ತಾನೆ. ಕರ್ಣ ಬಿತ್ತಿದ ಸಾಲುಗಳಲ್ಲಿ ಬಿದ್ದ ಬೀಜವಾಗಿ ಬೆಳೆದವಲ್ಲ. ಪಂಪನ ಕೈಯಿಂದ ಕೊಸರಿಕೊಂಡು ಬೆಳೆದ ಪಾತ್ರವಾಗಿದ್ದಾನೆ. ಕೃಷ್ಣ, ಕುಂತಿ, ದ್ರೋಣಾಚಾರ್ಯ, ಪರಶುರಾಮ, ದುರ್ಯೋಧನ, ಭೀಷ್ಮ ಈ ಎಲ್ಲ ಪಾತ್ರಗಳ ಜೊತೆಯಲ್ಲಿ ಕರ್ಣನ ರಾಸಾಯನಿಕ ಪ್ರಕ್ರಿಯೆ ನಡೆಯಲಿಲ್ಲ. ಆಂತರಿಕವಾಗಿ ಈ ಎಲ್ಲ ಪಾತ್ರಗಳೂ ಕರ್ಣನನ್ನು ಅಧಃಪತನಕ್ಕೆ ತಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಪಾತ್ರಗಳೇ ಆಗಿವೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಡಾ. ಎಂ. ಬಿ. ಹೂಗಾರ, ಪಂಪ ಭಾರತಕಾವ್ಯ ನಿತ್ಯ ಹೊಸದಾಗಿರುವಂತಹದ್ದು. ಒಂದೊಂದು ಸಲದ ಓದಿಗೂ ಒಂದೊಂದು ರೀತಿಯ ಅರ್ಥವನ್ನು ಸ್ಪುರಿಸುವಂತಹದ್ದು. ಮತ್ತೆ, ಮತ್ತೆ ಈ ಕಾವ್ಯ ಓದಬೇಕೆಂಬ ಮನೋಭೂಮಿಕೆಯನ್ನು ನಿರ್ಮಿಸುವಂತಹದ್ದು ಎಂದು ಹೇಳಿದರು.

ಇದೇ ವೇಳೆ ದಾವಣಗೇರಿಯ ಪದ್ಮಾ ಪ್ರಕಾಶ, ಬೆಂಗಳೂರಿನ ಡಾ. ನಿರಜಾ ನಾಗೇಂದ್ರಕುಮಾರ, ಗೋಕಾಕದ ಚಂದ್ರಕಲಾ ಸೋಲಾಪುರೆ ಅವರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಧಾರವಾಡದ ಜಿನ ಸಂಕೀರ್ತನ ತಂಡದವರು ಭಕ್ತಿಗೀತೆ ಪ್ರಸ್ತುತ ಪಡಿಸಿದರು.

ಡಾ. ಸಂಜೀವ ಕುಲಕರ್ಣಿ ಸ್ವಾಗತಿಸಿದರು, ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ವಂದಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ದತ್ತಿದಾನಿ ಸುಜಾತಾ ಹಡಗಲಿ, ಜಯಶ್ರೀ ಪಾಟೀಲ, ಡಾ. ಧನವಂತ ಹಾಜವಗೋಳ, ವೀರಣ್ಣ ಒಡ್ಡೀನ, ಜಿ.ಆರ್. ಸೂಳಿಭಾವಿ, ಜಿ.ಜಿ. ಬಿದರಿ, ಕೆ.ಜಿ. ಕಪಾಟಿ, ನಿಂಗಣ್ಣ ಕುಂಟಿ, ಡಾ. ಲಿಂಗರಾಜ ಅಂಗಡಿ, ಡಾ. ಎಸ್.ಎಸ್. ದೊಡಮನಿ, ಸಿದ್ದಲಿಂಗಯ್ಯ ಹಿರೇಮಠ ದಂಪತಿ, ಡಾ. ಚಂದ್ರಶೇಖರ ರೊಟ್ಟಿಗವಾಡ, ಶ್ರೀಧರ ಬಸ್ತಿ, ಅಶೋಕ ರೋಖಡೆ, ಶಿವಾನಂದ ಗಾಳಿ ಸೇರಿದಂತೆ ಇತರರು ಇದ್ದರು.