ಸಾರಾಂಶ
ಪೌರಾಣಿಕ ನಾಟಕಗಳು ಮಾನವೀಯ ಮೌಲ್ಯ ಹೊಂದಿರುವ ಗಣಿಗಳು. ಆದ್ದರಿಂದ ಅವುಗಳು ಸರ್ವಕಾಲಕ್ಕೂ ಸಲ್ಲುವಂತಹವು. ಸಂಸ್ಕೃತ ಅಭಿಜಾತ ಕವಿಗಳಲ್ಲಿ ಭಾಸನಿಗೆ ವಿಶೇಷ ಸ್ಥಾನವಿದೆ.
ಕನ್ನಡಪ್ರಭ ವಾರ್ತೆ ಹೊಸಕೋಟೆ
ನಗರದ ಹೊರವಲಯದ ನಿಂಬೆಕಾಯಿಪುರದಲ್ಲಿರುವ ಜನಪದರು ಸಾಂಸ್ಕೃತಿಕ ವೇದಿಕೆ ಆವರಣದಲ್ಲಿ ನಡೆದ ರಂಗಮಾಲೆ ೮೧ರ ಭಾಸಕವಿಯ ಕರ್ಣಭಾರ ನಾಟಕ ಪ್ರದರ್ಶನ ಯಶಸ್ವಿಯಾಗಿ ಪ್ರದರ್ಶನಗೊಂಡಿತು.ಬಿಂಕಬಿನ್ನಾಣ ತಂಡದ ವತಿಯಿಂದ ನಡೆದ ನಾಟಕ ನೆರೆದಿದ್ದ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಜನಪದರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪಾಪಣ್ಣ ಮಾತನಾಡಿ, ಪೌರಾಣಿಕ ನಾಟಕಗಳು ಮಾನವೀಯ ಮೌಲ್ಯ ಹೊಂದಿರುವ ಗಣಿಗಳು. ಆದ್ದರಿಂದ ಅವುಗಳು ಸರ್ವಕಾಲಕ್ಕೂ ಸಲ್ಲುವಂತಹವು. ಸಂಸ್ಕೃತ ಅಭಿಜಾತ ಕವಿಗಳಲ್ಲಿ ಭಾಸನಿಗೆ ವಿಶೇಷ ಸ್ಥಾನವಿದೆ. ಅವನು ಬರೆದ ಒಟ್ಟು ಹದಿಮೂರು ನಾಟಕಗಳಲ್ಲಿ ಊರುಭಂಗ ಮತ್ತು ಕರ್ಣಭಾರ ಇವು ಎರಡು ದುರಂತ ನಾಟಕಗಳು. ಸಂಸ್ಕೃತದ ಅಭಿಜಾತ ನಾಟಕಕಾರರು ಬಹುತೇಕ ಭರತನ ನಾಟ್ಯಶಾಸ್ತ್ರದ ಅನುಸಾರ, ಉಧಾತ್ತ ದ್ಯೇಯಗಳನ್ನು ಹೊಂದಿದ ನಾಯಕ, ನಾಯಕಿ ಪ್ರಧಾನ ಸುಖಾಂತ ನಾಟಕಗಳನ್ನು ಬರೆದಿದ್ದು, ದುರಂತ ನಾಟಕಗಳನ್ನು ಬರೆದ ಮೊದಲ ಕವಿಯಾಗಿ ಭಾಸನು ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾನೆ ಎಂದರು. ಜನಪದರು ಸಾಂಸ್ಕೃತಿಕ ವೇದಿಕೆ ಸದಸ್ಯರಾದ ದೊಡ್ಡಬನಹಳ್ಳಿ ಸಿದ್ಧೇಶ್ವರ, ಎಂ ಸುರೇಶ್, ಶಿವಕುಮಾರ್, ಮುನಿರಾಜಪ್ಪ, ರಾಜಣ್ಣ, ಚಲಪತಿ,ಬಸವರಾಜ್ ಮುಂತಾದವರು ನಾಟಕದ ನಿರ್ದೇಶಕ ಶಿವು ಹೊನ್ನಿಗನಹಳ್ಳಿ ಮತ್ತು ಎಲ್ಲಾ ಕಲಾವಿದರನ್ನು ಅಭಿನಂದಿಸಿದರು.