ಕರ್ನಾಟಕ-೫೦ ಸಂಭ್ರಮಾಚರಣೆಗೆ ಭರದ ಸಿದ್ಧತೆ

| Published : Oct 30 2023, 12:30 AM IST

ಸಾರಾಂಶ

ಗದಗ (ಕೃತಕಪುರ) ಐತಿಹಾಸಿಕ ಪರಂಪರೆ ಹಿನ್ನೆಲೆ ಹೊಂದಿದ ನಗರವಾಗಿದ್ದು, ಇದೇ ನೆಲದಲ್ಲಿ ಮತ್ತೊಂದು ಐತಿಹಾಸಿಕ, ಗತವೈಭವ ಮರುಕಳಿಸುವ ಕರ್ನಾಟಕ-೫೦ ಸಂಭ್ರಮಾಚರಣೆಗೆ ಭರದ ಸಿದ್ಧತೆ ಸಾಗಿದೆ.

ಮಹೇಶ ಛಬ್ಬಿ

ಕನ್ನಡಪ್ರಭ ವಾರ್ತೆ ಗದಗ

ಗದಗ (ಕೃತಕಪುರ) ಐತಿಹಾಸಿಕ ಪರಂಪರೆ ಹಿನ್ನೆಲೆ ಹೊಂದಿದ ನಗರವಾಗಿದ್ದು, ಇದೇ ನೆಲದಲ್ಲಿ ಮತ್ತೊಂದು ಐತಿಹಾಸಿಕ, ಗತವೈಭವ ಮರುಕಳಿಸುವ ಕರ್ನಾಟಕ-೫೦ ಸಂಭ್ರಮಾಚರಣೆಗೆ ಭರದ ಸಿದ್ಧತೆ ಸಾಗಿದೆ.

ಮೈಸೂರು ರಾಜ್ಯ ಕರ್ನಾಟಕವೆಂದು ಮರು ನಾಮಕರಣವಾಗಿ ೫೦ ವರ್ಷ ಪೂರೈಸಿದ ಹಿನ್ನೆಲೆ ರಾಜ್ಯಾದ್ಯಂತ ಕರ್ನಾಟಕ-೫೦ ಸುವರ್ಣ ಸಂಭ್ರಮಾಚರಣೆಯನ್ನು ನ. ೨ರಿಂದ ವರ್ಷ ಪೂರ್ತಿ ಆಚರಣೆ ಮಾಡುತ್ತಿದ್ದು, ಗದಗ ನಗರದಲ್ಲೂ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನವೆಂಬರ್ ೧, ೨ ಹಾಗೂ ೩ರಂದು ಕರ್ನಾಟಕ-೫೦ ಸಂಭ್ರಮಾಚರಣೆ ನಡೆಯಲಿದೆ.

ಗತವೈಭವ ಮರುಕಳಿಕೆ: ೧೯೭೩ರಲ್ಲಿ ಜರುಗಿದ ಸಮಾರಂಭ ಹಾಗೂ ಮೆರವಣಿಗೆಯಂತೆಯೇ ನವೆಂಬರ್‌ ೩ರಂದು ಸಹ ಆ ಗತವೈಭವವನ್ನು ಮರುಕಳಿಸುವ ಕಾರ್ಯಕ್ರಮ ಏರ್ಪಡಿಸಲು ಸಕಲ ಸಿದ್ಧತೆಯನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಮೆರವಣಿಗೆ ಬೀದಿಯುದ್ದಕ್ಕೂ ದೀಪಾಲಂಕಾರ, ಪ್ರಮುಖ ವೃತ್ತಗಳಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ದೀಪಾಲಂಕಾರ, ಕನ್ನಡಮಯ ವಾತಾವರಣವನ್ನು ಇಮ್ಮಡಿಗೊಳಿಸುವಂತೆ ಅದ್ಧೂರಿ ತಯಾರಿ ನಡೆಸಿದೆ.

ನವೆಂಬರ್‌ ೧ರಿಂದ ೩ರ ವರೆಗೆ ಪ್ರತಿ ದಿನ ಸಂಜೆ ಕಾಟನ್ ಸೇಲ್ ಸೊಸೈಟಿ ಆವರಣದ ಬೃಹತ್‌ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನ. ೧ರಂದು ಸ್ಥಳೀಯ ಕಲಾವಿದರಿಂದ ನ. ೨ ಮತ್ತು ೩ರಂದು ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬರಲಿವೆ.

ಅಧಿಕಾರಿಗಳಿಗೆ ಸೂಚನೆ: ಕರ್ನಾಟಕ-೫೦ ಸಂಭ್ರಮಾಚರಣೆ ಅದ್ಧೂರಿಯಿಂದ ಜರುಗಬೇಕು ಎಂಬ ಹಿನ್ನೆಲೆ, ಅದಕ್ಕಾಗಿ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಈಗಾಗಲೇ ಜಿಲ್ಲಾಡಳಿತ ಸೂಚಿಸಿದೆ.

ನ. ೩ರಂದು ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಇತರ ಗಣ್ಯರು ಆಗಮಿಸುವ ಹಿನ್ನೆಲೆ ಶಿಷ್ಟಾಚಾರದ ಅನ್ವಯ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ, ವಿವಿಧ ಸಂಘ-ಸಂಸ್ಥೆಗಳ ಸಭೆಗಳನ್ನು ಜಿಲ್ಲಾಡಳಿತ ಈಗಾಗಲೇ ನಡೆಸಿದೆ.

ನ. ೩ರಂದು ಬೆಳಗ್ಗೆ ಗದಗಿನ ವೀರನಾರಾಯಣ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಲಿದ್ದು, ಮೆರವಣಿಗೆ ಸಾಗುವ ಜಾಮಿಯಾ ಮಸೀದಿ, ಬಸವೇಶ್ವರ ವೃತ, ಕೆ.ಎಚ್. ಪಾಟೀಲ ವೃತ್ತ, ಭೂಮ ರೆಡ್ಡಿ ಸರ್ಕಲ್, ಜನರಲ್ ಕಾರ್ಯಪ್ಪ ಸರ್ಕಲ್ ಮಾರ್ಗವಾಗಿ ನಗರದ ಕಾಟನ್ ಸೇಲ್ ಸೊಸೈಟಿ ಆವರಣ ತಲುಪಲಿದ್ದು, ಈ ಎಲ್ಲ ಮಾರ್ಗಗಳು ಸೇರಿದಂತೆ ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಸ್ವಚ್ಛತೆ, ಕಾಮಗಾರಿ ಹಾಗೂ ವಿದ್ಯುತ್ ದ್ವೀಪಗಳಿಂದ ಅಲಂಕಾರ ಮಾಡಲಾಗಿದೆ.

ಗದಗ ಕನ್ನಡಮಯ: ಕರ್ನಾಟಕ-೫೦ ಸಂಭ್ರಮಾಚರಣೆ ಹಿನ್ನೆಲೆ ಗದಗ ನಗರದಲ್ಲಿ ಸಂಪೂರ್ಣ ಕನ್ನಡಮಯ ವಾತಾವರಣ ಸೃಷ್ಟಿಯಾಗಿದೆ. ಮೆರವಣಿಗೆ ಸಾಗುವ, ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ, ಸ್ವಚ್ಛಗೊಳಿಸಲಾಗಿದೆ. ನಗರದ ಪ್ರಮುಖ ವೃತ್ತಗಳಲ್ಲಿ, ವಿದ್ಯುತ್ ಕಂಬಗಳಲ್ಲಿ ಕನ್ನಡದ ಬಾವುಟಗಳು, ಫ್ಲೆಕ್ಸ್-ಬ್ಯಾನರ್‌ಗಳು, ಬಟಿಂಗ್ಸ್‌ಗಳು ರಾರಾಜಿಸುತ್ತೇವೆ. ವಿದ್ಯುತ್ ದ್ವೀಪಾಲಂಕಾರದಿಂದ ಗದಗ ನಗರ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.ಕರ್ನಾಟಕ-೫೦ ಸಂಭ್ರಮಾಚರಣೆ ಗದಗ ಜಿಲ್ಲೆಗೆ ಇದೊಂದು ಸುವರ್ಣ ಅವಕಾಶ. ಮೈಸೂರು ರಾಜ್ಯ ಕರ್ನಾಟಕವೆಂದು ಮರುನಾಮಕರಣ ಸಮಯದಲ್ಲಿ ದಿ. ಕೆ.ಎಚ್. ಪಾಟೀಲ, ದಿ. ದೇವರಾಜ ಅರಸು, ಕೃಷ್ಣರಾಜ ಒಡೆಯರ್ ಅವರು ೫೦ ವರ್ಷದ ಹಿಂದೆ ಗದಗ ಜಿಲ್ಲೆಗೆ ಸುವರ್ಣ ಅವಕಾಶ ಮಾಡಿಕೊಟ್ಟಿದ್ದು ಗದಗ ಜಿಲ್ಲೆಯ ಜನರ ಪುಣ್ಯ. ಸದ್ಯ ಗದಗ ನಗರದಲ್ಲಿ ಆಚರಿಸುತ್ತಿರುವುದು ಅತ್ಯಂತ ಖುಷಿ ತಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಮತ್ತೆ ಕರ್ನಾಟಕ-೫೦ ಸಂಭ್ರಮಾಚರಣೆ ಗತವೈಭವ ಮರುಕಳಿಸುವಂತೆ ಮಾಡಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿ ಹೇಳಿದರು.