ಕನ್ನಡಪ್ರಭ ವಾರ್ತೆ ಕಾಗವಾಡಭಾಷೆ, ಜಲ ಮತ್ತು ಗಡಿ ವಿವಾದಗಳ ಹಿನ್ನೆಲೆಯಲ್ಲಿ ಆಗಾಗ್ಗೆ ಸಂಘರ್ಷಕ್ಕೆ ಸಾಕ್ಷಿಯಾಗುತ್ತಿದ್ದ ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದಲ್ಲಿ ಇದೀಗ ಕಬ್ಬಿನ ನ್ಯಾಯಯುತ ಬೆಲೆಗಾಗಿ ರೈತರು ಒಂದಾಗಿದ್ದಾರೆ. ರಾಜ್ಯಗಳ ಗಡಿ, ಭಾಷೆಯ ಭಿನ್ನತೆಗಳನ್ನು ಬದಿಗಿಟ್ಟು, ತಮ್ಮ ಜೀವನಾಧಾರವಾದ ಕಬ್ಬಿಗೆ ಸೂಕ್ತ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ ಉಭಯ ರಾಜ್ಯಗಳ ಕಬ್ಬು ಬೆಳೆಗಾರರು ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಭಾಷೆ, ಜಲ ಮತ್ತು ಗಡಿ ವಿವಾದಗಳ ಹಿನ್ನೆಲೆಯಲ್ಲಿ ಆಗಾಗ್ಗೆ ಸಂಘರ್ಷಕ್ಕೆ ಸಾಕ್ಷಿಯಾಗುತ್ತಿದ್ದ ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದಲ್ಲಿ ಇದೀಗ ಕಬ್ಬಿನ ನ್ಯಾಯಯುತ ಬೆಲೆಗಾಗಿ ರೈತರು ಒಂದಾಗಿದ್ದಾರೆ. ರಾಜ್ಯಗಳ ಗಡಿ, ಭಾಷೆಯ ಭಿನ್ನತೆಗಳನ್ನು ಬದಿಗಿಟ್ಟು, ತಮ್ಮ ಜೀವನಾಧಾರವಾದ ಕಬ್ಬಿಗೆ ಸೂಕ್ತ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ ಉಭಯ ರಾಜ್ಯಗಳ ಕಬ್ಬು ಬೆಳೆಗಾರರು ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಿದ್ದಾರೆ.

ರೈತರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅ.15ರಿಂದ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸುವ ಕುರಿತ ಹಿಂದಿನ ನಿರ್ಧಾರಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದ್ದು, ಕಬ್ಬಿನ ಬೆಲೆ ನಿಗದಿ ವಿಚಾರ ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ.

12ರಂದು ದೆಹಲಿಯಲ್ಲಿ ಮಹತ್ವದ ಸಭೆ:

ಕಬ್ಬು ಬೆಳೆಗಾರರ ಸತತ ಹೋರಾಟ ಹಾಗೂ ಗಡಿಭಾಗದಲ್ಲಿ ತೀವ್ರಗೊಳ್ಳುತ್ತಿರುವ ಪ್ರತಿಭಟನೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಅ.12ರಂದು ಮಧ್ಯಾಹ್ನ 3ಕ್ಕೆ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಶಿವರಾಜ್‌ಸಿಂಗ್ ಚೌಹಾಣ್ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿಗಳು, ಸಹಕಾರ ಸಚಿವ ಲಕ್ಷ್ಮಣ ಸವದಿ, ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಸೇರಿದಂತೆ ಪ್ರಮುಖ ನಾಯಕರು ಹಾಗೂ ಕಬ್ಬು ಬೆಳೆಗಾರರ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ. ಕಬ್ಬಿನ ಬೆಲೆ ನಿಗದಿ, ರೈತರ ಹಿತರಕ್ಷಣೆ ಹಾಗೂ ಬೆಳೆಗಾರರಿಗೆ ನ್ಯಾಯಯುತ ಪ್ರತಿಫಲ ದೊರಕಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ನ್ಯಾಯ ಸಿಗದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್:

ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ರೈತರಿಗೆ ನ್ಯಾಯ ದೊರಕದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಶನಿವಾರ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸಂಜಯ ಬಿರಡಿ ನೇತೃತ್ವದಲ್ಲಿ ನೂರಾರು ರೈತರು ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಿದರು.

ರೈತ ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ರೈತ ಮುಖಂಡ ಶಶಿಕಾಂತ್ ಗುರೂಜಿ ಹಾಗೂ ಮಹಾರಾಷ್ಟ್ರದ ಮಾಜಿ ಸಂಸದ, ಪ್ರಭಾವಿ ರೈತ ಹೋರಾಟಗಾರ ರಾಜು ಶೆಟ್ಟಿ ಅವರ ನೇತೃತ್ವದಲ್ಲಿ ಹೋರಾಟವನ್ನು ರಾಜ್ಯವ್ಯಾಪಿ ವಿಸ್ತರಿಸುವ ಕುರಿತು ಚರ್ಚಿಸಲಾಯಿತು.

ಅ.12ರ ಸಭೆಯಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಯಾಗದಿದ್ದರೆ, ಅ.13ರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಲಕ್ಷಾಂತರ ರೈತರನ್ನು ಒಗ್ಗೂಡಿಸಿ ಅನಿರ್ದಿಷ್ಟಾವಧಿ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.

ಸಭೆಯಲ್ಲಿ ರೈತ ಮುಖಂಡರಾದ ಸತೀಶ ಗಾಣಿಗೇರ, ಪ್ರವೀಣ ಕುಲಕರ್ಣಿ, ಮುನ್ನಾ ಪಾಟೀಲ, ಯಶವಂತ ಪಾಟೀಲ, ಸೌರಭ ಕುಲಕರ್ಣಿ, ಭರತೇಶ ಪಾಟೀಲ, ರವಿ ಪಾಟೀಲ, ಸಂದೀಪ ಪಾಟೀಲ, ಮಹೇಶ ತೆರದಾಳೆ, ಶೀತಲ ಪಾಟೀಲ, ಬಾಳಾಸಾಬ ಪಾಟೀಲ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.--------

ಬಾಕ್ಸ್‌....

ಸಕ್ಕರೆ ಉದ್ಯಮಕ್ಕೆ ಕೋಟ್ಯಂತರ ಆದಾಯ; ರೈತರಿಗೆ ಮಾತ್ರ ಬೆಲೆ ಸಂಕಷ್ಟ!

ಕಬ್ಬು ಕೇವಲ ಸಕ್ಕರೆ ಉತ್ಪಾದನೆಗೆ ಸೀಮಿತವಾಗಿಲ್ಲ. ಎಥೆನಾಲ್, ಮೊಲಾಸಿಸ್ (ಕಾಕಂಬಿ) ಹಾಗೂ ವಿದ್ಯುತ್ ಉತ್ಪಾದನೆಯಂತಹ ಉಪಉತ್ಪನ್ನಗಳ ಮೂಲಕವೂ ಸಕ್ಕರೆ ಉದ್ಯಮ ಆರ್ಥಿಕ ಚಟುವಟಿಕೆಗೆ ದೊಡ್ಡ ಕೊಡುಗೆ ನೀಡುತ್ತಿದೆ. ಆದರೆ, ಇಷ್ಟೊಂದು ಮೌಲ್ಯ ಸೃಷ್ಟಿಸುವ ಕಬ್ಬು ಬೆಳೆಗಾರರಿಗೆ ಮಾತ್ರ ತಮ್ಮ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ದೊರಕುತ್ತಿಲ್ಲ ಎಂಬ ಅಸಮಾಧಾನ ರೈತರಲ್ಲಿ ಹೆಚ್ಚಾಗಿದೆ.

ಕಬ್ಬು ಬೆಳೆಸಲು ಬೇಕಾಗುವ ಬೀಜ, ಗೊಬ್ಬರ, ಕಾರ್ಮಿಕರ ಕೂಲಿ, ನೀರಾವರಿ ಹಾಗೂ ಸಾಗಣೆ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಬೆಲೆ ನಿಗದಿಪಡಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಅ.12ರಂದು ದೆಹಲಿಯಲ್ಲಿ ನಡೆಯಲಿರುವ ಸಭೆ ನಿರ್ಣಾಯಕ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ರೈತರ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆಯುತ್ತದೆಯೇ ಅಥವಾ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕಬ್ಬಿನ ಬೆಲೆಗಾಗಿ ಆರಂಭವಾಗಿರುವ ಈ ಹೋರಾಟ ಇದೀಗ ಕರ್ನಾಟಕ–ಮಹಾರಾಷ್ಟ್ರ ಗಡಿಯನ್ನು ಮೀರಿ ರಾಷ್ಟ್ರಮಟ್ಟದ ಗಮನ ಸೆಳೆಯುತ್ತಿದ್ದು, ರೈತರ ಮುಂದಿನ ನಡೆ ಹಾಗೂ ಸರ್ಕಾರಗಳ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.