ದೇವರಾಜ ಅರಸು ಬದುಕಿದ್ದರೆ ಪ್ರಧಾನಿ ಆಗುವ ಸಾಧ್ಯತೆ ಇತ್ತು

| Published : Dec 09 2024, 12:48 AM IST

ದೇವರಾಜ ಅರಸು ಬದುಕಿದ್ದರೆ ಪ್ರಧಾನಿ ಆಗುವ ಸಾಧ್ಯತೆ ಇತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುಳಿದ ವರ್ಗದಿಂದ ಬಂದು ಮುಖ್ಯಮಂತ್ರಿ ಆಗುವುದೆಂದರೆ ದೇವರಾಜ ಅರಸು ಪಟ್ಟಿರುವ ಶ್ರಮ, ಅವರಲ್ಲಿನ ಪ್ರತಿಭೆ, ಸಂಸ್ಕಾರ, ಬದ್ಧತೆ, ದಕ್ಷತೆ, ನ್ಯಾಯಪರ ನಿಲುವು, ಸಾಮಾಜಿಕ ಕಳಕಳಿ ಎಷ್ಟಿತ್ತು ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಮತ್ತಷ್ಟು ವರ್ಷಗಳ ಕಾಲ ಬದುಕಿದ್ದರೆ ಭಾರತದ ಪ್ರಧಾನಿ ಆಗುವ ಸಾಧ್ಯತೆ ಇತ್ತು ಎಂದು ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್. ಜಯರಾಮರಾಜೇ ಅರಸ್ ಅಭಿಪ್ರಾಯಪಟ್ಟರು.

ಕರ್ನಾಟಕ ಅರಸು ಮಹಾಮಂಡಲಿ ಚಾರಿಟಬಲ್ ಟ್ರಸ್ಟ್, ಕೆಯುಎಂಸಿ ಟ್ರಸ್ಟ್ ಸಹಯೋಗದಲ್ಲಿ ನಗರದ ತ್ಯಾಗರಾಜ ರಸ್ತೆ ಬಳಿಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಎಸ್. ಶ್ರೀಧರರಾಜೇ ಅರಸ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಕರಾಮುವಿ ನಿವೃತ್ತ ಪ್ರಾಧ್ಯಾಪಕಿ ಡಾ.ಎಂ.ಆರ್. ಭಾರತಿ ಹಾಗೂ ಲೇಖಕ ಲಕ್ಷ್ಮೀಕಾಂತರಾಜೇ ಅರಸ್ ಅವರು ಸಂಪಾದಿಸಿದ ‘ಯಶೋಗಾಥೆ ಅರಸು ಜನಾಂಗದ ಸಾಧಕರು’ ಕೃತಿಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಹಿಂದುಳಿದ ವರ್ಗದಿಂದ ಬಂದು ಮುಖ್ಯಮಂತ್ರಿ ಆಗುವುದೆಂದರೆ ದೇವರಾಜ ಅರಸು ಪಟ್ಟಿರುವ ಶ್ರಮ, ಅವರಲ್ಲಿನ ಪ್ರತಿಭೆ, ಸಂಸ್ಕಾರ, ಬದ್ಧತೆ, ದಕ್ಷತೆ, ನ್ಯಾಯಪರ ನಿಲುವು, ಸಾಮಾಜಿಕ ಕಳಕಳಿ ಎಷ್ಟಿತ್ತು ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಹಿಂದುಳಿದವರೂ ಮುಖ್ಯಮಂತ್ರಿ ಆಗಬಹುದು ಎಂಬುದನ್ನು ದೇವರಾಜ ಅರಸು ಮೊದಲ ಬಾರಿ ತೋರಿಸಿಕೊಟ್ಟರು. ಅವರ ಉಳುವವನೇ ಭೂಮಿಯ ಒಡೆಯ, ಹಾವನೂರು ಆಯೋಗದ ಜಾರಿ, ಮಲ ಹೊರುವ ಪದ್ಧತಿ ನಿಷೇಧ ಮುಂತಾದ ಕ್ರಾಂತಿಕಾರಕ ಸುಧಾರಣೆ ಜಾರಿಗೊಳಿಸಿದ್ದರ ಫಲವಾಗಿ ರಾಜ್ಯದ ಜನರ ಹೃದಯದಲ್ಲಿ ಅಜರಾಮರವಾಗಿ ಉಳಿದಿದ್ದಾರೆ.ಎಂದು ಅವರು ಬಣ್ಣಿಸಿದರು.

ಎಲ್ಲಾ ಸಮುದಾಯದವರೂ ತಮ್ಮ ಸಮಾಜದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸಾಕಷ್ಟು ವಿದ್ಯಾರ್ಥಿನಿಲಯ ಸ್ಥಾಪಿಸಿದ್ದಾರೆ. ಆದರೆ ಅರಸು ಸಮುದಾಯ ತಮ್ಮ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯಗಳ ಸ್ಥಾಪನೆಗೆ ಮುಂದಾಗದಿರುವುದು ನೋವಿನ ಸಂಗತಿ ಎಂದು ಅವರು ವಿಷಾದಿಸಿದರು.

ಇಂದಿನ ಯುವ ಪೀಳೀಗೆಗೆ ಮೊಬೈಲ್, ಸಾಮಾಜಿಕ ಜಾಲತಾಣವೇ ಆದರ್ಶವಾಗಿದೆ. ಯುವ ಜನರು ಮೊಬೈಲ್ ಇತ್ಯಾದಿ ತಂತ್ರಜ್ಞಾನ ಆಧಾರಿತ ಸಾಧನವನ್ನು ತಮ್ಮ ಬದುಕು ರೂಪಿಸಿಕೊಳ್ಳಲು ಬಳಸಿಕೊಳ್ಳಬೇಕೆ ಹೊರತು ಮೊಬೈಲ್ ಲೋಕದಲ್ಲಿಯೇ ಮುಳುಗಿ ಹೋಗಬಾರದು ಎಂದು ಅವರು ಎಚ್ಚರಿಸಿದರು.

ಚಿತ್ರ ಸಂಕಲನ ಬಿ. ಸುರೇಶ್ ಅರಸ್ ಮಾತನಾಡಿ, ಅರಸು ಸಮುದಾಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂದಿಗೂ ಬಡತನದಲ್ಲಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತ ಕಾರ್ಯಕ್ರಮ ಕೈಗೊಳ್ಳಬೇಕು. ಒಳ್ಳೆಯ ಕೆಲಸ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಸಲಹೆ ನೀಡಿದರು.

ಕೃತಿಯ ಸಂಪಾದಕರಾದ ಡಾ.ಎಂ.ಆರ್. ಭಾರತಿ, ಲೇಖಕ ಲಕ್ಷ್ಮೀಕಾಂತರಾಜೇ ಅರಸ್ ಹಾಗೂ ಎಂ.ಎಲ್. ಬಸವರಾಜೇ ಅರಸ್, ಡಾ. ರಾಮರಾಜೇ ಅರಸ್, ಎಂ.ಕೆ. ಆನಂದರಾಜೇ ಅರಸ್, ಸುಶೀಲಾ ಅರಸ್ ಮೊದಲಾದವರು ಇದ್ದರು.

ಕೃತಿಯ ಪ್ರಧಾನ ಸಂಪಾದಕ ಬಿ.ಎಸ್. ಶ್ರೀಧರರಾಜೇ ಅರಸ್ ಅಧ್ಯಕ್ಷತೆ ವಹಿಸಿದ್ದರು.