ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಬೊಕ್ಕಸ ತುಂಬಿಸಿಕೊಳ್ಳಲು ಜಿ.ಎಸ್.ಟಿ ವ್ಯಾಪ್ತಿಗೆ ಒಳಪಡದಿರುವ ಸಣ್ಣ ವ್ಯಾಪಾರಿಗಳ ನೆಮ್ಮದಿ ಕೆಡಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಸೇನಾ ಪಡೆ ಪದಾಧಿಕಾರಿಗಳು ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.ಸಣ್ಣ ವ್ಯಾಪಾರಿಗಳಿಗೆ ರಾತ್ರೋರಾತ್ರಿ ಲಕ್ಷಾಂತರ ರೂ. ಜಿ.ಎಸ್.ಟಿ ಪಾವತಿಸುವಂತೆ ರಾಜ್ಯ ಸರ್ಕಾರ ನೋಟಿಸ್ ನೀಡಿರುವುದು ಅತ್ಯಂತ ಖಂಡನೀಯ. ಜಿ.ಎಸ್.ಟಿ ಹೆಸರಿನಲ್ಲಿ ಹೆಚ್ಚು ತೆರಿಗೆ ವಿಧಿಸುವ ಮೂಲಕ ಅವರನ್ನು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ. ಹಾಲು, ಹೂ, ಹಣ್ಣು, ತರಕಾರಿ ವ್ಯಾಪಾರಿಗಳು ಇಂದು ಬಂಡವಾಳ ಹಾಕಿದರೆ ನಾಳೆ 500- 1000 ರೂ. ಲಾಭ ಬರುತ್ತದೆ ಎಂದರು.ಮೊದಲು ಟ್ಯಾಕ್ಸ್ ಎನ್ನುವುದು ಶ್ರೀಮಂತರ ಮೇಲಿತ್ತು. ಈಗ ದಿನಗೂಲಿ ವ್ಯಾಪಾರಿಗಳ ಮೇಲೂ ಹೊರಿಸುತ್ತಿರುವುದು ಸಣ್ಣ ವ್ಯಾಪಾರಿಗಳು ಜೀವನ ನಡೆಸುವುದೇ ಕಷ್ಟವಾಗಿದೆ. ಯುಪಿಐ ಆಧಾರಿತ ವಹಿವಾಟುಗಳ ಮೇಲೆ ಜಿಎಸ್.ಟಿ ವಿಧಿಸುವ ವಿಚಾರ ರಾಜ್ಯದಲ್ಲಿ ಗೊಂದಲದ ಗೂಡಾಗಿದೆ. ಈ ವಿಚಾರವಾಗಿ ವಿರೋಧ ವ್ಯಕ್ತಪಡಿಸಿರುವ ಸಣ್ಣ ವ್ಯಾಪಾರಿಗಳು ಜು. 23 ರಿಂದ 25 ರವರೆಗೆ ವ್ಯಾಪಾರ ವಹಿವಾಟು ಬಂದ್ ಗೆ ಕರೆ ನೀಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ಹೇಳಿದರು.ಬೆಲೆ ಮತ್ತು ತೆರಿಗೆ ಏರಿಸಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ಈಗ ಇದರ ಮೇಲೂ ಕಣ್ಣಿಟ್ಟಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ರಾಜ್ಯ ಸರ್ಕಾರ ಸಿಕ್ಕ ಸಿಕ್ಕಲ್ಲೆಲ್ಲಾ ಹಣವನ್ನು ಲೂಟಿ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ. ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯು, ಪ್ರತಿದಿನ ವ್ಯಾಪಾರ ಮಾಡದಿದ್ದರೆ ಊಟಕ್ಕೂ ಪರದಾಡುವ ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ನೀಡಿರುವುದು ಸರಿಯಲ್ಲ. ಕೂಡಲೇ ಈ ಆದೇಶವನ್ನು ಸಿಎಂ ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಪ್ರಭುಶಂಕರ, ಗೋಲ್ಡನ್ ಸುರೇಶ್, ಮಧುವನ ಚಂದ್ರು, ಸಿಂಧುವಳ್ಳಿ ಶಿವಕುಮಾರ್, ಸುಬ್ಬೇಗೌಡ, ಬಸವರಾಜು, ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ, ನೇಹಾ, ಭಾಗ್ಯಮ್ಮ ಮೊದಲಾದವರು ಇದ್ದರು.