ಒಳಮೀಸಲಾತಿ ಜಾರಿ ಮಾಡದಿದ್ದರೆ, ಕರ್ನಾಟಕ ಬಂದ್‌: ಮಾಜಿ ಸಚಿವ ನಾರಾಯಣಸ್ವಾಮಿ

| Published : Jul 22 2025, 12:17 AM IST

ಒಳಮೀಸಲಾತಿ ಜಾರಿ ಮಾಡದಿದ್ದರೆ, ಕರ್ನಾಟಕ ಬಂದ್‌: ಮಾಜಿ ಸಚಿವ ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಆ. 15ರೊಳಗೆ ಜಾರಿ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಆ. 15ರೊಳಗೆ ಜಾರಿ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಚಂದ್ರಚೂಡ್‌ ಅವರು ಒಳ ಮೀಸಲಾತಿ ನೀಡಲು ಆದೇಶಿಸಿ ಆ. 1ರಂದು ಒಂದು ವರ್ಷ ಪೂರೈಕೆ ಆಗಲಿದೆ. ಆದರೂ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುತ್ತಿಲ್ಲ. ಮೂರು ದಶಕಗಳಿಂದ ಹೋರಾಟ ನಡೆಸುತ್ತಾ ಬರಲಾಗುತ್ತಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಮಾತ್ರ ಒಳ ಮೀಸಲಾತಿ ಕಡೆಗೆ ಗಮನ ಹರಿಸುತ್ತಿಲ್ಲ. ನ್ಯಾ. ನಾಗಮೋಹನ್ ದಾಸ್‌ ಆಯೋಗ ಪರಿಶಿಷ್ಟ ಜಾತಿ ಗಣತಿ ಸಂಪೂರ್ಣವಾಗಿ ಪೂರ್ಣಗೊಳಿಸಿಲ್ಲ. ಮೀಸಲಾತಿಯಿಂದ ಯಾರಿಗೆ ಅನ್ಯಾಯ ಆಗಿದೆ ಎಂಬ ಅಂಕಿ-ಅಂಶವನ್ನೂ ಸರ್ಕಾರಿ ಇಲಾಖೆಗಳಿಂದಲೇ ಆಯೋಗಕ್ಕೆ ಪಡೆದುಕೊಳ್ಳಲು ಆಗಿಲ್ಲ. ಬರೀ ಕಾಲಹರಣ ಮಾಡಲಾಗುತ್ತಿದೆ. ಈ ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಒಳ ಮೀಸಲಾತಿಗೆ ಒತ್ತಾಯಿಸಿ ಆಗಸ್ಟ್‌ ಒಂದರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಾದಿಗ ಒಕ್ಕೂಟ ಹಾಗೂ ಮಾದಿಗ ಸಮಾಜದ ನೇತೃತ್ವದಲ್ಲಿ ಹೋರಾಟ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತಕ್ಕೆ ಬಂದ ಕೂಡಲೇ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದಿದ್ದರು. ಆದರೆ, ಅಧಿಕಾರಕ್ಕೆ ಬಂದು 2 ವರ್ಷಗಳು ಕಳೆದರೂ ಒಳ ಮೀಸಲಾತಿ ಜಾರಿ ಮಾಡಿಲ್ಲ. ಕಾಂತರಾಜ ಅರಸು ಆಯೋಗದ ವರದಿ ಜಾರಿಗಾಗಿ ಸಿದ್ದರಾಮಯ್ಯನವರು ಮುಂದಾಗಿದ್ದರು. ಆದರೆ, ಮೇಲ್ವರ್ಗದ ಕೆಲ ಮುಖಂಡರು ಒತ್ತಾಯ ಮಾಡುತ್ತಲೇ ವರದಿ ಜಾರಿಯಿಂದ ಹಿಂದೆ ಸರಿದರು. ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಚಾಂಪಿಯನ್‌ ಅಲ್ಲವೇ ಅಲ್ಲ. ಜಿಪಂ, ತಾಪಂ ಚುನಾವಣೆಯನ್ನೂ ಇದುವರೆಗೆ ನಡೆಸಲಾಗಿಲ್ಲ. ಇದರಿಂದ ಹಿಂದುಳಿದ ವರ್ಗದವರಿಗೆ ಅನ್ಯಾಯ ಆಗಿದೆ. ಇನ್ನೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೊಳಿಸಲು ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.

ಈ ಹಿಂದೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಇದ್ದಾಗ ಒಳ ಮೀಸಲಾತಿ ವರ್ಗೀಕರಣ ಮಾಡಲಾಗಿತ್ತು. ಜೊತೆಗೆ ಮೀಸಲಾತಿ ಹೆಚ್ಚಳ ಕೂಡ ಮಾಡಲಾಗಿತ್ತು. ಈಗ ನಾಗಮೋಹನ ದಾಸ್‌ ಆಯೋಗ ಮಾತ್ರ ಶೇ.91ರಷ್ಟು ಗಣತಿ ಮಾಡಲಾಗಿದೆ, ಬೆಂಗಳೂರಿನಲ್ಲಿ ಶೇ.56ರಷ್ಟು ಪ್ರಗತಿ ಆಗಿದೆ ಎಂದು ಹೇಳುತ್ತಿದೆ. ರಾಜ್ಯ ಸರ್ಕಾರ ಸುಖಾಸುಮ್ಮನೆ ಕಾಲ ಹರಣ ಮಾಡದೇ, ಒಳ ಮೀಸಲಾತಿ ಜಾರಿ ಮಾಡಬೇಕು. ಮೂರು ದಶಕಗಳಿಂದ ಹೋರಾಟ ನಡೆಸುತ್ತಾ ಬರುತ್ತಿರುವ ಮಾದಿಗರಿಗೆ ಹಾಗೂ ಅದರ ಉಪ ಜಾತಿಗಳಿಗೆ ರಾಜ್ಯ ಸರ್ಕಾರ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ವೀರಸ್ವಾಮಿ, ಮಂಜುನಾಥ, ಬಲ್ಲಾಹುಣಸಿ ರಾಮಣ್ಣ, ಪೂಜಪ್ಪ, ಎಚ್‌. ಶೇಷು, ಬಸವರಾಜ, ಯಂಕಪ್ಪ, ಸೇಲ್ವಂ, ಶೇಕ್ಷಾವಲಿ, ಶ್ರೀನಿವಾಸ್ ಮತ್ತಿತರರಿದ್ದರು.