ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್

| Published : Mar 23 2025, 01:36 AM IST

ಸಾರಾಂಶ

ಬೆಳಗ್ಗೆಯಿಂದಲೂ ಬಸ್‌, ಆಟೋ, ವಾಹನಗಳ ಸಂಚಾರ ಹಾಗೂ ವ್ಯಾಪಾರ ವಹಿವಾಟುಗಳು ನಿರಾತಂಕವಾಗಿ ಸಾಗಿದವು. ಸರ್ಕಾರಿ, ಖಾಸಗಿ ಕಚೇರಿಗಳು ಹಾಗೂ ಶಾಲಾ- ಕಾಲೇಜುಗಳು ಸಹ ಎಂದಿನಂತೆಯೇ ಕಾರ್ಯನಿರ್ವಹಿಸಿದವು.

ಹುಬ್ಬಳ್ಳಿ: ಮಹಾರಾಷ್ಟ್ರಿಗರ ಕನ್ನಡ ವಿರೋಧಿ ನೀತಿ ಹಾಗೂ ಕನ್ನಡಿಗರ ಮೇಲಾಗುತ್ತಿರುವ ದಬ್ಬಾಳಿಕೆ ಖಂಡಿಸಿ ವಾಟಾಳ್ ನಾಗರಾಜ್ ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ ವಾಣಿಜ್ಯ ನಗರಿಯಲ್ಲಿ ಕೇವಲ ಪ್ರತಿಭಟನೆಗೆ ಸೀಮಿತವಾಯಿತು. ಇನ್ನು ಈ ಬಂದ್‌ಗೆ ಉತ್ತರ ಕರ್ನಾಟಕ ಆಟೋ ಚಾಲಕ, ಮಾಲಕರ ಸಂಘದ ಸದಸ್ಯರು ವಿರೋಧ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಬೆಳಗ್ಗೆಯಿಂದಲೂ ಬಸ್‌, ಆಟೋ, ವಾಹನಗಳ ಸಂಚಾರ ಹಾಗೂ ವ್ಯಾಪಾರ ವಹಿವಾಟುಗಳು ನಿರಾತಂಕವಾಗಿ ಸಾಗಿದವು. ಸರ್ಕಾರಿ, ಖಾಸಗಿ ಕಚೇರಿಗಳು ಹಾಗೂ ಶಾಲಾ- ಕಾಲೇಜುಗಳು ಸಹ ಎಂದಿನಂತೆಯೇ ಕಾರ್ಯನಿರ್ವಹಿಸಿದವು. ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ‌ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕರುನಾಡ ವಿಜಯ ಸೇನೆ ನೇತೃತ್ವದಲ್ಲಿ ಕೆಲವು ಕನ್ನಡ ಸಂಘಟನೆಗಳ ಪದಾಧಿಕಾರಿಗಳು ನಗರದ ಚೆನ್ನಮ್ಮ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಎಂಇಎಸ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಚೆನ್ನಮ್ಮ ವೃತ್ತದಿಂದ ಮಿನಿವಿಧಾನ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಪದೇ ಪದೇ ಗಡಿವಿವಾದ ಮುಂದೆ ಇಟ್ಟುಕೊಂಡು ಕಾಲು ಕೆದರಿ ಜಗಳಕ್ಕೆ ಬರುವ ಎಂ.ಇ.ಎಸ್. ಪುಂಡರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು. ರಾಜ್ಯದಿಂದ ಆಯ್ಕೆಯಾದ ಸಂಸದರು ಇದರ ಬಗ್ಗೆ ಸಂಸತ್ತಿನಲ್ಲಿ ಕರ್ನಾಟಕದ ಪರವಾಗಿ ಧ್ವನಿ ಎತ್ತಿ ಗಡಿವಿವಾದ ಅಂತ್ಯಗೊಳಿಸಲಿ. ಮತ್ತೆ ಇಂತಹ ಘಟನೆಗಳು ಕರ್ನಾಟಕದಲ್ಲಿ ಮರುಕಳಿಸದಂತೆ ಬೆಳಗಾವಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಜೀವ ದುಮ್ಮಕನಾಳ, ಚಿದಾನಂದ ಸವದತ್ತಿ, ಪುಂಡಲೀಕ ಬಡಿಗೇರ, ಚನ್ನಬಸಪ್ಪ ಯಲಿಗಾರ, ಹಸನಸಾಬ್ ಬಡೇಖಾನ್, ದುರ್ಗಪ್ಪ ಜಂಗಲಿ, ಸೈಫುದ್ದೀನ್, ಹನುಮಂತಪ್ಪ ಪವಾಡಿ, ಪ್ರಕಾಶ ಉಳ್ಳಾಗಡ್ಡಿ, ರಾಜು ಕಾಲವಾಡ, ಸದಾನಂದ ಪವಾಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಚಿತ್ರಮಂದಿರಗಳು ಓಪನ್

ಕರ್ನಾಟಕ ಬಂದ್‌ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ವ್ಯಕ್ತಪಡಿಸಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಬೆಳಗಿನ ಚಿತ್ರ ಪ್ರದರ್ಶನ ಬಂದ್‌ ಮಾಡುವುದಾಗಿ ಹೇಳಿತ್ತು. ಆದರೆ, ಶನಿವಾರ ನಗರದಲ್ಲಿರುವ ಎಲ್ಲ ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ಬಂದ್‌ ಮಾಡದೇ ಎಂದಿನಂತೆ ಆರಂಭಗೊಂಡಿರುವುದು ಕಂಡುಬಂದಿತು.

ಹುಬ್ಬಳ್ಳಿಯಲ್ಲಿ ಬಂದ್ ಇಲ್ಲ

ನಗರದ ಚೆನ್ನಮ್ಮ ವೃತ್ತದಲ್ಲಿ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಉತ್ತರ ಕರ್ನಾಟಕ ಆಟೋ ಚಾಲಕ, ಮಾಲಕರ ಸಂಘದ ಸದಸ್ಯರು ನಿಲಿಜಿನ್ ರಸ್ತೆಯಿಂದ ''''''ಬಂದ್ ಇಲ್ಲ, ಬಂದ್ ಇಲ್ಲ'''' ಎಂದು ಘೋಷಣೆ ಕೂಗುತ್ತ ಕೈಯ್ಯಲ್ಲಿ ಗುಲಾಬಿ ಹೂವು ಹಿಡಿದುಕೊಂಡು ಚೆನ್ನಮ್ಮ ವೃತ್ತಕ್ಕೆ ಬಂದರು. ಬಳಿಕ ಸುತ್ತಮುತ್ತಲಿನ ವ್ಯಾಪಾರಸ್ಥರಿಗೆ, ಅಂಗಡಿಕಾರರಿಗೆ ಗುಲಾಬಿ ಹೂ ನೀಡಿ, ಬಂದ್‌ಗೆ ಬೆಂಬಲಿಸದಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಆಟೋ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಉತ್ತರ ಕರ್ನಾಟಕ ಭಾಗದ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ಕೂತು ಕರ್ನಾಟಕ ಬಂದ್ ಕರೆ ನೀಡಿದ್ದಾರೆ. ಮಕ್ಕಳ ಪರೀಕ್ಷಾ ಸಮಯದಲ್ಲಿ ಬಂದ್ ಮಾಡಿದರೆ ಅವರ ಭವಿಷ್ಯಕ್ಕೆ ಸಮಸ್ಯೆ ಆಗುತ್ತದೆ. ಇದ್ಯಾವ ಸೂಕ್ಷ್ಮವೂ ಅರಿಯದೆ ಬಂದ್ ಕರೆ ನೀಡಿರುವುದು ಸರಿಯಲ್ಲ. ಇದೊಂದು ಬೋಗಸ್ ಬಂದ್ ಆಗಿದೆ. ಹೀಗಾಗಿ ಹುಬ್ಬಳ್ಳಿ ಜನತೆ ಬಂದ್‌ಗೆ ಬೆಂಬಲಿಸದಂತೆ ಗುಲಾಬಿ ನೀಡಿ ವಿನಂತಿಸುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಜೇಶ ಬಿಜವಾಡ, ಮುರಳ ಇಂಗಳಹಳ್ಳಿ, ದಾವಲಸಾಬ ಕುರುಹಟ್ಟಿ, ಮಲ್ಲಿಕಾರ್ಜುನ ಬಳ್ಳಾರಿ, ಹನುಮಂತ ಬೀಪಾಲಿ, ಶುಕ್ರು ದೇಸಾಯಿ, ಮಹಾವೀರ ಬಿಲಾನ್, ಫಾರೂಕ್ ಕಿತ್ತೂರು ಇತರರು ಪಾಲ್ಗೊಂಡಿದ್ದರು.ಕರ್ನಾಟಕ ಬಂದ್‌ಗೆ ಪ್ರತಿಭಟನೆ ಮೂಲಕ ಬೆಂಬಲ

ಧಾರವಾಡ:

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶನಿವಾರ ಕರವೇ ಶಿವರಾಮೇಗೌಡ ಬಣದಿಂದ ಪ್ರತಿಭಟನೆ ಮೂಲಕ ಬಂದ್‌ ಬೆಂಬಲಿಸಲಾಯಿತು.

ಕಡಪಾ ಮೈದಾನದಿಂದ ಹೊರಟ ಪ್ರತಿಭಟನಾ ರ್‍ಯಾಲಿ ಹಳೆ ಬಸ್ ನಿಲ್ದಾಣ, ಆಜಾದ ಪಾರ್ಕ್ ಮೂಲಕ ಜ್ಯುಬಿಲಿ ಸರ್ಕಲ್ ವರೆಗೆ ನಡೆಯಿತು. ಎಂಇಎಸ್ ಅಣಕು ಶವಯಾತ್ರೆ ಮೂಲಕ ರ್‍ಯಾಲಿ ಮಾಡಲಾಯಿತು. ಇದರ ಜೊತೆಗೆ ಪ್ರತಿಭಟನೆ ವೇಳೆ ವಿವೇಕಾನಂದ ವೃತ್ತದಲ್ಲಿ ಎಮ್ಮೆ ಮೇಲೆ ಹತ್ತಿ ಕಾರ್ಯಕರ್ತ ಪರಮೇಶ ಕಾಳೆ ಘೋಷಣೆ ಕೂಗುವಾಗ ಗದ್ದಲಕ್ಕೆ ಎಮ್ಮೆ ಓಡಿ ಹೋದ ಘಟನೆಯೂ ನಡೆಯಿತು. ಕೂಡಲೇ ಉಳಿದ ಕಾರ್ಯಕರ್ತರು ಎಮ್ಮೆ ಹಿಡಿದು ಅನಾಹುತ ತಪ್ಪಿಸಿದರು. ಈ ಪ್ರತಿಭಟನೆ ಹೊರತು ಪಡಿಸಿ ಧಾರವಾಡದಲ್ಲಿ ಯಾವುದೇ ರೀತಿಯ ಬಂದ್‌ ವಾತಾವರಣ ಇರಲಿಲ್ಲ. ಎಂದಿನಂತೆ ಶಾಲಾ-ಕಾಲೇಜು, ಸರ್ಕಾರಿ ಇಲಾಖೆಗಳು ಕಾರ್ಯ ನಿರ್ವಹಿಸಿದವು.