ಕರ್ನಾಟಕ ಬಂದ್‌ ಪ್ರತಿಭಟನೆಗೆ ಮಾತ್ರ ಸೀಮಿತ

| Published : Mar 23 2025, 01:35 AM IST

ಸಾರಾಂಶ

ಗಡಿಭಾಗದಲ್ಲಿ ಮರಾಠಿಗರ ಪುಂಡಾಟಕ್ಕೆ ಸರ್ಕಾರ ಕಡಿವಾಣ ಹಾಕುವಂತೆ ಘೋಷಣೆ ಕೂಗಿ ಆಕ್ರೋಶ

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಸಂಘಟನೆ ನಿಷೇಧಿಸುವುದು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್‌ ಕರೆಗೆ ಬೆಳಗಾವಿಯಲ್ಲಿ ನೀರಸ ಪ್ರತಿಕ್ರಿಯೆ ದೊರೆತಿದೆ. ಕರ್ನಾಟಕ ಬಂದ್‌ ಕೇವಲ ಪ್ರತಿಭಟನೆಗೆ ಸೀಮಿತವಾಯಿತು.

ನಗರದ ಕೇಂದ್ರ ಬಸ್‌ ನಿಲ್ದಾಣದ ಬಳಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ರೈತ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು. ಬಳಿಕ ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಹಾಯ್ದು ಕೋರ್ಟ್‌ ರಸ್ತೆ ಮೂಲಕ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ಎಂಇಎಸ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗಡಿಭಾಗದಲ್ಲಿ ಮರಾಠಿಗರ ಪುಂಡಾಟಕ್ಕೆ ಸರ್ಕಾರ ಕಡಿವಾಣ ಹಾಕುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಕನ್ನಡ ಹೋರಾಟಗಾರರು ಮಾನವ ಸರಪಳಿ ನಿರ್ಮಿಸಿದರು. ನಡು ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು. ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಕನ್ನಡ ಹೋರಾಟಗಾರ ಮಹಾಂತೇಶ ರಣಗಟ್ಟಿಮಠ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

ತಟ್ಟದ ಬಂದ್‌ ಬಿಸಿ:

ಕರ್ನಾಟಕ ಬಂದ್‌ ಕರೆಗೆ ವಿವಿಧ ಸಂಘಟನೆಗಳು, ವ್ಯಾಪಾರಸ್ಥರು, ಆಟೋ ಚಾಲಕರಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಲಿಲ್ಲ. ಹಾಗಾಗಿ ಎಂದಿನಂತೆಯೇ ನಗರದಲ್ಲಿ ಆಟೋ, ಸಾರಿಗೆ ಬಸ್‌ಗಳು ಸೇರಿದಂತೆ ಇತರೆ ವಾಹನಗಳು ಸಂಚರಿಸಿದವು. ಅಂಗಡಿ ಮುಗ್ಗಟ್ಟುಗಳನ್ನು ತೆರೆದು ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸಿದರು. ಇದರಿಂದಾಗಿ ಬಂದ್‌ ಬಿಸಿ ಯಾರಿಗೂ ತಟ್ಟಲಿಲ್ಲ. ಹೋಟೆಲ್, ಬಾರ್ ರೆಸ್ಟೋರೆಂಟ್, ಮಾಲ್ ಗಳು ಚಿತ್ರಮಂದಿರಗಲ್ಲಿ ಎಂದಿನಂತೆ ವಹಿವಾಟು ನಡೆಯಿತು. ನಗರ ಸಾರಿಗೆ ಹಾಗೂ ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆಯೇ ಸಂಚರಿಸಿದವು.