ಸಾರಾಂಶ
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಮಾತನಾಡಿ, ಸವಾಲಿನ ಆರ್ಥಿಕ ವಾತಾವರಣದ ಹೊರತಾಗಿಯೂ ಬ್ಯಾಂಕ್ ವಹಿವಾಟಿನಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಿದೆ. ಇದು ನಿರಂತರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಖಾಸಗಿ ರಂಗದ ಮುಂಚೂಣಿಯ ಕರ್ಣಾಟಕ ಬ್ಯಾಂಕ್ ಕಳೆದ ಒಂಭತ್ತು ತಿಂಗಳ ಅವಧಿಯಲ್ಲಿ ಸಾರ್ವಕಾಲಿಕ ಗರಿಷ್ಠ 1,77,978.27 ಕೋಟಿ ರು.ಗಳ ವಹಿವಾಟು ದಾಖಲಿಸಿದೆ. ಬ್ಯಾಂಕಿನ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶ್ರೀಕೃಷ್ಣನ್ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ಮೂರನೇ ತ್ರೈಮಾಸಿಕ ಹಾಗೂ ಡಿಸೆಂಬರ್ ಅಂತ್ಯದ ವರೆಗಿನ ಒಂಭತ್ತು ತಿಂಗಳ ಹಣಕಾಸು ಲೆಕ್ಕಾಚಾರಗಳಿಗೆ ಅನುಮೋದನೆ ನೀಡಲಾಯಿತು.ಮೂರನೇ ತ್ರಾಮಾಸಿಕ ಅವಧಿಯಲ್ಲಿ ಬ್ಯಾಂಕ್ 283.60 ಕೋಟಿ ರು. ನಿವ್ವಳ ಲಾಭ ದಾಖಲಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 331.08 ಕೋಟಿ ರು. ನಿವ್ವಳ ಲಾಭ ಪಡೆದಿತ್ತು. ಈ ಒಂಭತ್ತು ತಿಂಗಳಲ್ಲಿ ಬ್ಯಾಂಕ್ 1,020 ಕೋಟಿ ರು. ನಿವ್ವಳ ಲಾಭ ಗಳಿಸಿದ್ದು, ಕಳೆದ ಬಾರಿ 1,032.04 ಕೋಟಿ ರು. ನಿವ್ವಳ ಲಾಭ ಪಡೆದಿತ್ತು.
ಒಟ್ಟು ಮುಂಗಡದಲ್ಲಿ ಬ್ಯಾಂಕ್ 77,859.75 ಕೋಟಿ ರು.ಗಳ ಬೆಳವಣಿಗೆ ಕಂಡಿದ್ದು, ಶೇ.11.64 ಪ್ರಗತಿ ದಾಖಲಿಸಿದೆ. ಒಟ್ಟು ಠೇವಣಿಗಳು 1,00,118.52 ಕೋಟಿ ರು. ಆಗಿದ್ದು, ಶೇ. 8.59 ಬೆಳವಣಿಗೆ ದಾಖಲಿಸಿದೆ. 2024 ಮಾರ್ಚ್ ಅಂತ್ಯಕ್ಕೆ ಹೋಲಿಸಿದರೆ ಜಿಎನ್‌ಪಿಎ 42 ಬಿಪಿಎಸ್‌ನಿಂದ ಅಂದರೆ ಶೇ.3.53 ರಿಂದ ಶೇ. 3.11 ಕ್ಕೆ ಇಳಿಕೆಯಾಗಿದೆ. ಅದೇ ರೀತಿ ಎನ್‌ಎನ್‌ಪಿಎ ಕೂಡ ಮಾರ್ಚ್ 2024 ಕ್ಕೆ ಹೋಲಿಸಿದರೆ ಮತ್ತು 16 ಬಿಪಿಎಸ್‌ನಿಂದ ಶೇ. 1.55ರಷ್ಟು ಕಡಿಮೆಯಾಗಿದೆ.ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀಕೃಷ್ಣನ್ ಎಚ್. ಮಾತನಾಡಿ, ಕರ್ಣಾಟಕ ಬ್ಯಾಂಕ್ ಚಿಲ್ಲರೆ ಮತ್ತು ಮಿಡ್-ಕಾರ್ಪೊರೇಟ್ ಬೆಳವಣಿಗೆ ಕಂಡಿದೆ. ನಮ್ಮ ಶಾಖೆ, ಮಾರಾಟ ಮತ್ತು ಡಿಜಿಟಲ್ ಚಾನೆಲ್‌ಗಳಿಂದ ಇನ್ೂ ಹೆಚ್ಚಿನ ಫಲಿತಾಂಶ ಪಡೆಯುವ ವಿಶ್ವಾಸ ಇದೆ ಎಂದಿದ್ದಾರೆ.
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಮಾತನಾಡಿ, ಸವಾಲಿನ ಆರ್ಥಿಕ ವಾತಾವರಣದ ಹೊರತಾಗಿಯೂ ಬ್ಯಾಂಕ್ ವಹಿವಾಟಿನಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಿದೆ. ಇದು ನಿರಂತರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ.