700 ಕೋಟಿ ರು. ಈಕ್ವಿಟಿ ಷೇರು ಸಂಗ್ರಹಕ್ಕೆ ಕರ್ಣಾಟಕ ಬ್ಯಾಂಕ್‌ ತೀರ್ಮಾನ

| Published : Jan 29 2024, 01:32 AM IST

ಸಾರಾಂಶ

ಕರ್ಣಾಟಕ ಬ್ಯಾಂಕ್‌ ನಿರ್ದೇಶಕರ ಮಂಡಳಿಯು 1500 ಕೋಟಿ ರು.ಗಳಲ್ಲಿ ಬಾಕಿ ಉಳಿದ 700 ಕೋಟಿ ರು.ಗಳನ್ನು ಸಂಗ್ರಹಿಸಲು ಅನುಮೋದನೆ ನೀಡಿದೆ. ಆದ್ಯತೆಯ ವಿಧಾನಗಳ ಮೂಲಕ 100 ಕೋಟಿ ರು.ವರೆಗಿನ ಮೊತ್ತ ಮತ್ತು 600 ಕೋಟಿ ರು.ಗಳನ್ನು ಕಾನೂನು ಅನುಮತಿಸಿದ ವಿಧಾನಗಳ ಮೂಲಕ ಸಂಗ್ರಹಿಸಲು ಅನುಮೋದಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ 700 ಕೋಟಿ ರು.ವರೆಗಿನ ಈಕ್ವಿಟಿ ಷೇರು ಬಂಡವಾಳವನ್ನು ವಿತರಿಸಲು ಉದ್ದೇಶಿಸಿದೆ. ಅದರಲ್ಲಿ ರು. 100 ಕೋಟಿಗಳನ್ನು ಆದ್ಯತೆಯ ಆಧಾರದ ಮೇಲೆ ಮತ್ತು ರು. 600 ಕೋಟಿ ರು.ಗಳನ್ನು ಅನುಮೋದಿಸಲಾದ ವಿಭಾಗಗಳ ಮೂಲಕ ಸಮತೋಲನಗೊಳಿಸಲು ತೀರ್ಮಾನಿಸಿದೆ.2023ರ ಸೆ.22ರಂದು ನಡೆದ ಕರ್ಣಾಟಕ ಬ್ಯಾಂಕ್‌ನ ನಿರ್ದೇಶಕರ ಮಂಡಳಿ ಸಭೆಯಲ್ಲಿ ಭಾರತೀಯ ಅಥವಾ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಭಾರತೀಯ/ ಅನುಮತಿ ಪಡೆದ ವಿದೇಶಿ ಕರೆನ್ಸಿಯಲ್ಲಿ 1,500 ಕೋಟಿ ರು. ಮೊತ್ತದ ಈಕ್ವಿಟಿ ಬಂಡವಾಳ ಸಂಗ್ರಹಿಸಲು ಅನುಮೋದನೆ ನೀಡಲಾಗಿತ್ತು. ಅದರಂತೆ, ಬ್ಯಾಂಕ್ 2023ರ ಅ.26ರಂದು ರು. 800 ಕೋಟಿವರೆಗಿನ ಮೊತ್ತವನ್ನು ಸಂಗ್ರಹಿಸಿದೆ.

ಶನಿವಾರ ನಡೆದ ಸಭೆಯಲ್ಲಿ ನಿರ್ದೇಶಕರ ಮಂಡಳಿಯು 1500 ಕೋಟಿ ರು.ಗಳಲ್ಲಿ ಬಾಕಿ ಉಳಿದ 700 ಕೋಟಿ ರು.ಗಳನ್ನು ಸಂಗ್ರಹಿಸಲು ಅನುಮೋದನೆ ನೀಡಿದೆ. ಆದ್ಯತೆಯ ವಿಧಾನಗಳ ಮೂಲಕ 100 ಕೋಟಿ ರು.ವರೆಗಿನ ಮೊತ್ತ ಮತ್ತು 600 ಕೋಟಿ ರು.ಗಳನ್ನು ಕಾನೂನು ಅನುಮತಿಸಿದ ವಿಧಾನಗಳ ಮೂಲಕ ಸಂಗ್ರಹಿಸಲು ಅನುಮೋದಿಸಿದೆ.

ಆದ್ಯತೆಯ ಆಧಾರದಲ್ಲಿ 10 ರು. ಮುಖಬೆಲೆಯ 37,72,730 ಈಕ್ವಿಟಿ ಷೇರುಗಳನ್ನು ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್‌ಗೆ, ಪ್ರತಿ ಈಕ್ವಿಟಿ ಷೇರಿಗೆ (ಪ್ರೀಮಿಯಂ ಸೇರಿದಂತೆ) 265.06 ರು. ದರದಲ್ಲಿ ವಿತರಿಸಲು ಅನುಮೋದಿಸಲಾಗಿದೆ. ಉಳಿದಂತೆ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ-2015ರ ನಿಯಮಗಳ ಪ್ರಕಾರ ಅನುಮತಿಸಲಾದ ಹೂಡಿಕೆದಾರರಿಗೆ 10 ರು. ಮುಖಬೆಲೆಯ ಈಕ್ವಿಟಿ ಷೇರುಗಳನ್ನು ವಿತರಿಸಲು ಮತ್ತು ಹಂಚಿಕೆ ಮಾಡಲು ಮಂಡಳಿಯು ಅನುಮೋದಿಸಿದೆ.

ಈ ಪ್ರಸ್ತಾವಿತ ವಿಚಾರವು ಬ್ಯಾಂಕಿನ ಭವಿಷ್ಯದ ಬೆಳವಣಿಗೆಗೆ ತನ್ನ ಆರ್ಥಿಕ ಅಡಿಪಾಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರ ಆದಾಯವನ್ನು ಬೆಳೆಯುತ್ತಿರುವ ದೀರ್ಘಾವಧಿಯ ಬಂಡವಾಳ ಅಗತ್ಯತೆ ಸೇರಿದಂತೆ ಬ್ಯಾಂಕಿನ ವ್ಯವಹಾರದ ಅಗತ್ಯತೆಗಳನ್ನು ಪೂರೈಸಲು ಬಳಸಲಾಗುತ್ತದೆ.

ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್ ಎಚ್. ಈ ಕುರಿತು ಮಾತನಾಡಿ, ಈ ಪ್ರಸ್ತಾವಿತ ಬಂಡವಾಳದ ಒಳಹರಿವು ಬ್ಯಾಂಕಿನ ಬೆಳವಣಿಗೆ ಮತ್ತು ಸ್ಥಿರತೆಗೆ ಪೂರಕವಾಗಿದೆ. ಭವಿಷ್ಯದಲ್ಲಿ ನಮ್ಮ ಬದ್ಧತೆಯ ಕಾರ್ಯಕ್ಷಮತೆಯಿಂದ ಹೂಡಿಕೆದಾರರನ್ನು ಆಕರ್ಷಿಸುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದಿದ್ದಾರೆ.

ಕರ್ಣಾಟಕ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಮಾತನಾಡಿ, ಉದ್ದೇಶಿತ ಬಂಡವಾಳ ಹೆಚ್ಚಳದಿಂದ ಬ್ಯಾಂಕ್‌ನ ಬೆಳವಣಿಗೆ ಮತ್ತು ನಾವೀನ್ಯತೆಯ ಪ್ರಯಾಣವು ಮತ್ತಷ್ಟು ವೇಗ ಪಡೆಯಲಿದೆ. ಬ್ಯಾಂಕ್‌ನ ಬೆಳವಣಿಗೆಗೆ ಹೊಸ ಆಯ್ಕೆಗಳನ್ನು ಅನ್ವೇಷಿಸಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು, ಡಿಜಿಟಲ್ ರೂಪಾಂತರವನ್ನು ಅಳವಡಿಸಿಕೊಳ್ಳಲು, ಪಾಲುದಾರಿಕೆಗಳನ್ನು ಬೆಂಬಲಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.