ಪಟ್ಟಣದ ರಂಗೀಕಟ್ಟೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಶಾಖೆ ಆರಂಭವಾಗಿ ೫೦ ವರ್ಷಗಳಾದ ಪ್ರಯುಕ್ತ ಗೋಲ್ಡನ್ ಜ್ಯುಬಿಲಿ ಕಾರ್ಯಕ್ರಮ ಆಚರಿಸಲಾಯಿತು.
ಭಟ್ಕಳ ಶಾಖೆಗೆ 50 ವರ್ಷ-ಸಂಭ್ರಮಾಚರಣೆ
ಕನ್ನಡಪ್ರಭ ವಾರ್ತೆ ಭಟ್ಕಳಪಟ್ಟಣದ ರಂಗೀಕಟ್ಟೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಶಾಖೆ ಆರಂಭವಾಗಿ ೫೦ ವರ್ಷಗಳಾದ ಪ್ರಯುಕ್ತ ಗೋಲ್ಡನ್ ಜ್ಯುಬಿಲಿ ಕಾರ್ಯಕ್ರಮ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಉಪ ಮಹಾಪ್ರಬಂಧಕ ರಮೇಶ ವೈದ್ಯ ಮಾತನಾಡಿ, ನಮ್ಮ ಬ್ಯಾಂಕು ೧೦೨ ವಸಂತ ಪೂರೈಸಿದ್ದು, ಆರಂಭದಿಂದಲೂ ಪ್ರತಿ ತ್ರೈಮಾಸಿಕ ವರದಿಗಳಲ್ಲಿಯೂ ಲಾಭ ಮಾಡಿದೆ. ಕೋವಿಡ್ ಸಮಯದಲ್ಲಿ ಒಂದು ವರ್ಷ ಹೊರತುಪಡಿಸಿ ಎಲ್ಲ ವರ್ಷಗಳಲ್ಲಿಯೂ ಶೇರುದಾರರಿಗೆ ಡಿವಿಡೆಂಡ್ ನೀಡಿದ ಬ್ಯಾಂಕ್ ನಮ್ಮದಾಗಿದೆ. ಕಳೆದ ಕೆಲವು ಸಮಯದಿಂದ ನಮ್ಮ ಬ್ಯಾಂಕ್ ಬಗ್ಗೆ ಅಪಪ್ರಚಾರ ಮಾಡಲು ಯತ್ನಿಸಲಾಗಿದೆ. ನಮ್ಮ ಬ್ಯಾಂಕು ಅತ್ಯಂತ ಸದೃಢವಾಗಿದ್ದು, ನಮ್ಮ ಗ್ರಾಹಕರು ಯಾವುದೇ ಸುಳ್ಳು ಮಾಹಿತಿಗೆ ಕಿವಿಗೊಡಬೇಡಿ ಎಂದು ಕೋರಿದರು.ನಮ್ಮ ಬ್ಯಾಂಕು ಈಗ ೧ ಲಕ್ಷದ ೭೫ ಸಾವಿರ ಕೋಟಿಗೂ ಹೆಚ್ಚು ವ್ಯವಹಾರ ಹೊಂದಿದ್ದು, ಇನ್ನೂ ಹೆಚ್ಚಿನ ಗುರಿ ನಮ್ಮದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಕರ್ಣಾಟಕ ಬ್ಯಾಂಕ್ ೧೦೦ ವಸಂತ ಪೂರೈಸಿದರೆ, ಭಟ್ಕಳ ಶಾಖೆ ೫೦ ವಸಂತ ಪೂರೈಸಿರುವುದು ಸಂತಸ ತಂದಿದೆ. ಭಟ್ಕಳ ಶಾಖೆಯಲ್ಲಿ ಅತ್ಯಂತ ಉತ್ತಮ ಸಹಕಾರ, ವ್ಯವಹಾರಕ್ಕೆ ಅನುಕೂಲತೆಗಳನ್ನು ಮಾಡಿಕೊಡುವುದನ್ನು ನೋಡಿದ್ದೇನೆ ಎಂದರು. ಬ್ಯಾಂಕಿನ ಗೋಲ್ಡಜ್ ಜುಬಿಲಿ ಪ್ರಯುಕ್ತ ಆಯ್ದ ಗ್ರಾಹಕರಲ್ಲಿ ಬ್ಯಾಂಕಿನ ಭಟ್ಕಳ ಶಾಖೆಯ ಪ್ರಥಮ ಗ್ರಾಹಕ ಗಣಪತಿ ಎಂ. ಭಟ್ಟ, ಗ್ರಾಹಕರಾದ ಪ್ರಕಾಶ ಎನ್. ಭಟ್ಟ, ನಾಗೇಶ ಮೋಹನ ಭಟ್, ವಿದ್ಯಾ ರಾಧಾಕೃಷ್ಣ ಭಟ್ಟ, ನಾರಾಯಣ ದೈಮನೆ, ಅನಿವಾಸಿ ಗ್ರಾಹಕರಾದ ಲಚ್ಮಯ್ಯ ಸಿದ್ದನಮನೆ ಹಾಗೂ ಪುರುಷೋತ್ತಮ ನಾಯಕ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಶಾಖಾ ಪ್ರಬಂಧಕ ಸುನಿಲ್ ಪೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.