ಕರ್ಣಾಟಕ ಬ್ಯಾಂಕ್ ಉತ್ತಮ ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳ ಮೂಲಕ ದೇಶಾದ್ಯಂತ ಗ್ರಾಹಕರ ವಿಶ್ವಾಸಗಳಿಸಿದೆ. ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಹೊಂದಿ ಜನರಿಗೆ ಉತ್ತಮ ಸೇವೆಗಳನ್ನು ಒದಗಿಸಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಆಶಿಸಿದರು.

ಹಿರೇಕೆರೂರು: ಕರ್ಣಾಟಕ ಬ್ಯಾಂಕ್ ಉತ್ತಮ ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳ ಮೂಲಕ ದೇಶಾದ್ಯಂತ ಗ್ರಾಹಕರ ವಿಶ್ವಾಸಗಳಿಸಿದೆ. ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಹೊಂದಿ ಜನರಿಗೆ ಉತ್ತಮ ಸೇವೆಗಳನ್ನು ಒದಗಿಸಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಆಶಿಸಿದರು.

ಪಟ್ಟಣದ ಬಣಕಾರ ಕಾಂಪ್ಲೆಕ್ಸ್‌ನಲ್ಲಿ `ಕರ್ಣಾಟಕ ಬ್ಯಾಂಕ್''''ನ ನೂತನ ಶಾಖೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯ ''''ಆಸರೆ'''' ಕಾರ್ಯಕ್ರಮದಡಿ ಒಂಟಿಯಾಗಿ ವಾಸಿಸುವವರ ಸುರಕ್ಷತೆಗೆ ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿದ ಅವರು, ಸೈಬರ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಪರಿಚಿತ ಕರೆಗಳು, ಸಂದೇಶಗಳು ಹಾಗೂ ಅನುಮಾನಾಸ್ಪದ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಕರ್ಣಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ರಾಘುರಾಮ್ ಎಚ್.ಎಸ್. ಮಾತನಾಡಿ, ಕೃಷಿ, ಕೃಷಿಯೇತರ ಚಟುವಟಿಕೆಗಳು ಹಾಗೂ ಉದ್ಯಮಗಳ ಬೆಳವಣಿಗೆಗೆ ಬ್ಯಾಂಕ್ ಸದಾ ಬೆಂಬಲವಾಗಿ ನಿಲ್ಲಲಿದೆ. ಗ್ರಾಹಕರು ಬ್ಯಾಂಕಿನ ವಿವಿಧ ಹಣಕಾಸು ಸೇವೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದರು.

ಉಪ ಪ್ರಧಾನ ವ್ಯವಸ್ಥಾಪಕ ವಿನಯ್ ಕುಲಕರ್ಣಿ ಮಾತನಾಡಿ, ಸ್ಥಳೀಯ ಜನರು ಬ್ಯಾಂಕಿನ ವಿವಿಧ ಸೇವೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಹುಬ್ಬಳ್ಳಿ ಪ್ರಾದೇಶಿಕ ಮುಖ್ಯಸ್ಥ ಈರಣ್ಣ ನಾಗರಾಳ ಮಾತನಾಡಿ, ಸ್ಥಳೀಯ ಜನರ ವಿಶ್ವಾಸ ಮತ್ತು ಸಹಕಾರದೊಂದಿಗೆ ಹಿರೇಕೆರೂರು ಶಾಖೆಯನ್ನು ಮುಂಚೂಣಿ ಶಾಖೆಯನ್ನಾಗಿ ಬೆಳೆಸುವ ಸಂಕಲ್ಪ ವ್ಯಕ್ತಪಡಿಸಿದರು. ಗ್ರಾಹಕಸ್ನೇಹಿ ಸೇವೆ, ವಿಶ್ವಾಸಾರ್ಹ ಬ್ಯಾಂಕಿಂಗ್ ಹಾಗೂ ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಹಕರಿಗೆ ಗೌರವ ಸನ್ಮಾನ..

ಕಾರ್ಯಕ್ರಮದಲ್ಲಿ ಹಿರೇಕೆರೂರಿನ ಹಿರಿಯ ಉದ್ಯಮಿ ಹಾಗೂ ಗುತ್ತಿಗೆದಾರ ಶಿವನಗೌಡ, ಕಳೆದ ಎರಡು ದಶಕಗಳಿಂದ ಬ್ಯಾಂಕಿನ ಗ್ರಾಹಕರಾಗಿರುವ ಷಣ್ಮುಖಪ್ಪ ಬಳ್ಳಾರಿ, ಶಾಖೆಯ ಕಟ್ಟಡದ ಮಾಲೀಕ ಲಕ್ಷಪತಿ ಬಣಕಾರ ಹಾಗೂ ಶಿಕ್ಷಣ, ಸಹಕಾರ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಎಸ್.ಎಸ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಕ್ಲಸ್ಟರ್ ಮುಖ್ಯಸ್ಥರಾದ ಸಂಜಯ್ ಗುಂಡಾಳೆ, ಪ್ರಕಾಶ ಬಿ., ಕುಮಾರ ಬಣಕಾರ, ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯ ಸಿಬ್ಬಂದಿ ಹಾಗೂ ವಿವಿಧ ಶಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಸುತ್ತಮುತ್ತಲಿನ ಗ್ರಾಮಗಳ ಗಣ್ಯರು, ಗ್ರಾಹಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ನಿಧಿ ಪೈ ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಸಿದ್ದೇಶ್ ಬಿ.ಎಸ್. ವಂದಿಸಿದರು.

ಜಿಲ್ಲೆಯ 10ನೇ ಶಾಖೆ:ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಹಾಗೂ ರೈತರು, ವ್ಯಾಪಾರಸ್ಥರು ಮತ್ತು ಉದ್ಯಮಿಗಳಿಗೆ ಬ್ಯಾಂಕಿಂಗ್ ಸೇವೆಗಳನ್ನು ಮತ್ತಷ್ಟು ಹತ್ತಿರವಾಗಿಸುವ ಉದ್ದೇಶದಿಂದ ಕರ್ಣಾಟಕ ಬ್ಯಾಂಕ್‌ನ ನೂತನ ಶಾಖೆಯನ್ನು ಹಿರೇಕೆರೂರಿನಲ್ಲಿ ಆರಂಭಿಸಲಾಗಿದೆ. ಇದು ಬ್ಯಾಂಕಿನ 987ನೇ ಶಾಖೆ ಹಾಗೂ ಮಿನಿ ಇ-ಲಾಬಿಯನ್ನು ಉದ್ಘಾಟಿಸಲಾಗಿದ್ದು, ಇದು ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯ 56ನೇ ಹಾಗೂ ಹಾವೇರಿ ಜಿಲ್ಲೆಯ 10ನೇ ಶಾಖೆಯಾಗಿದೆ.

ಹಿರೇಕೆರೂರಿನಲ್ಲಿ ಹೊಸ ಶಾಖೆ ಆರಂಭವಾಗಿರುವುದು ಸ್ಥಳೀಯ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವುದರ ಜತೆಗೆ, ಕೃಷಿ ಮತ್ತು ಸಣ್ಣ ಉದ್ಯಮಗಳ ಆರ್ಥಿಕ ಚಟುವಟಿಕೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.