ನಾನು ಕರಸೇವಕ, ನನ್ನನ್ನೂ ಬಂಧಿಸಿ: ಬಿಜೆಪಿ ಅಭಿಯಾನ

| Published : Jan 05 2024, 01:45 AM IST / Updated: Jan 05 2024, 03:09 PM IST

ನಾನು ಕರಸೇವಕ, ನನ್ನನ್ನೂ ಬಂಧಿಸಿ: ಬಿಜೆಪಿ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯಲ್ಲಿ ಕರಸೇವಕರನ್ನು 30 ವರ್ಷಗಳ ಬಳಿಕ ಬಂಧಿಸಿರುವುದಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಬಿಜೆಪಿ ಇದೀಗ ಅಭಿಯಾನವನ್ನು ಶುರು ಮಾಡಿದೆ. ಅದರನ್ವಯ ‘ನಾನು ಕರಸೇವಕ, ನನ್ನನ್ನು ಬಂಧಿಸಿ ಎಂದು ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಯೋಧ್ಯೆ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾದವರನ್ನು ಬಂಧಿಸಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಪ್ರತಿಪಕ್ಷ ಬಿಜೆಪಿಯು ಗುರುವಾರದಿಂದ ರಾಜ್ಯಾದ್ಯಂತ ‘ನಾನೊಬ್ಬ ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಅಭಿಯಾನವನ್ನು ಆರಂಭಿಸಿದೆ.

ಅಭಿಯಾನದ ಅಂಗವಾಗಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಾಜಿ ಸಚಿವ ವಿ.ಸುನೀಲ್‍ ಕುಮಾರ್ ಅವರು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ಮುಂಭಾಗ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ಚಿಕ್ಕಮಗಳೂರಿನ ನಗರ ಪೊಲೀಸ್ ಠಾಣೆ ಎದುರು ‘ನಾನು ಕ್ರಿ.ಶ.1992 ಡಿಸೆಂಬರ್ 6ರ ಅಯೋಧ್ಯೆ ಶ್ರೀರಾಮ ಮಂದಿರದ ಕರಸೇವಕ. ನನ್ನನ್ನೂ ಬಂಧಿಸಿ’ ಎಂಬ ಫಲಕವನ್ನು ಕೈಯಲ್ಲಿ ಹಿಡಿದುಕೊಂಡು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಕೆಲಹೊತ್ತಿನ ಬಳಿಕ ಉಭಯ ನಾಯಕರನ್ನು ಆಯಾ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆಗೊಳಿಸಿದರು.

ಇನ್ನೂ ಕೆಲವು ಮುಖಂಡರು ಈ ಅಭಿಯಾನದಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್‌ ಕುಮಾರ್‌, 1990 ಮತ್ತು 92ರ ಕರಸೇವೆಯಲ್ಲಿ ಕರ್ನಾಟಕದಿಂದಲೂ ಸಾವಿರಾರು ಜನರು ಆವತ್ತಿನ ಸರ್ಕಾರದ ಬೆದರಿಕೆಗೂ ಬಗ್ಗದೆ ಭಾಗವಹಿಸಿದ್ದರು. ಆವತ್ತಿನ ಕಾಂಗ್ರೆಸ್ಸಿಗರು ಕರಸೇವೆಗೆ ಬೆದರಿಕೆ ಒಡ್ಡಿದ್ದರು. ಇವತ್ತು ಶ್ರೀರಾಮಮಂದಿರ ಉದ್ಘಾಟನೆ ಸಂದರ್ಭದಲ್ಲೂ ಕೂಡ ಕರಸೇವಕರು ಮತ್ತು ರಾಮಭಕ್ತರನ್ನು ಬೆದರಿಸುವ, ಭಯಪಡಿಸುವ ತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವೆಲ್ಲರೂ ಈ ಹೋರಾಟದಲ್ಲಿ ಭಾಗವಹಿಸಿದವರು. ರಾಮಮಂದಿರದ ನಿರ್ಮಾಣವು ಬಿಜೆಪಿಯ ಬದ್ಧತೆ. ನಮ್ಮ ಪ್ರಣಾಳಿಕೆಯಲ್ಲಿ ಹತ್ತಾರು ವರ್ಷಗಳಿಂದ ಹೇಳುತ್ತಲೇ ಬಂದಿದ್ದೇವೆ. ರಾಮಮಂದಿರವು ಒಂದು ರಾಜಕೀಯ ವಸ್ತುವಲ್ಲ. ಅದೊಂದು ಭಾವನೆಯ, ನಡವಳಿಕೆಯ ಹಾಗೂ ಬದ್ಧತೆಯ ಪ್ರಶ್ನೆ ಎಂದರು.

ರಾಮಭಕ್ತರನ್ನು ಕ್ರಿಮಿನಲ್‍ಗಳಿಗೆ ಹೋಲಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ಕಾರ್ಯಕರ್ತನನ್ನು ಕ್ರಿಮಿನಲ್ ಎಂದು ಹೇಳಿ ತನ್ನನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಹೊರಟಿದೆ. ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಕಾಂಗ್ರೆಸ್ಸಿಗರಿಗೆ ಅಮಾಯಕನಂತೆ ಕಾಣುತ್ತಾನೆ. ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಕೆ.ಜೆ.ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದವರು ಕಾಂಗ್ರೆಸ್ ಪಕ್ಷಕ್ಕೆ ಬ್ರದರ್ಸ್ ಆಗಿ ಕಾಣುತ್ತಾರೆ. ಆದರೆ, ಕರಸೇವೆಯಲ್ಲಿ ಭಾಗವಹಿಸಿದ ರಾಮಭಕ್ತರು ಮಾತ್ರ ಕಾಂಗ್ರೆಸ್ಸಿಗರಿಗೆ ಕ್ರಿಮಿನಲ್ ರೂಪದಲ್ಲಿ ಕಾಣುತ್ತಾರೆ ಎಂದು ಆಕ್ಷೇಪಿಸಿದರು.

ಈ ಅಭಿಯಾನ ಮುಂದುವರೆಯಲಿದೆ. ರಾಮಭಕ್ತರನ್ನು ಬೆದರಿಸುವ ಕಾರ್ಯವನ್ನು ಸರ್ಕಾರ ಕೈಬಿಡಬೇಕು. ಮಂದಿರ ನಿರ್ಮಾಣ ಕಾರ್ಯದಲ್ಲಿ ಸರಕಾರವೂ ಸಹಕರಿಸಬೇಕು ಎಂದು ಸುನೀಲ್‌ ಕುಮಾರ್‌ ಆಗ್ರಹಿಸಿದರು.