ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ ಆರು ತಿಂಗಳಿಂದ ಮುಡಾ ಅಕ್ರಮ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ, ವಕ್ಫ್ ವಿವಾದ ಸೇರಿದಂತೆ ಸಾಲು ಸಾಲು ಆರೋಪ, ವಿವಾದಗಳ ನಡುವೆಯೂ ತೀವ್ರ ಜಿದ್ದಾಜಿದ್ದಿನ ಕಣವಾಗಿದ್ದ ಮೂರು ವಿಧಾನಸಭಾ ಕ್ಷೇತ್ರಗಳ ಉಪಸಮರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಬಾರಿಸಿದೆ.ತಮ್ಮ ಹಿಡಿತದಲ್ಲಿದ್ದ ಸಂಡೂರು ಕ್ಷೇತ್ರವನ್ನು ಉಳಿಸಿಕೊಳ್ಳುವುದರ ಜತೆಗೆ ಜೆಡಿಎಸ್ ಭದ್ರಕೋಟೆಯಾದ ಚನ್ನಪಟ್ಟಣ ಮತ್ತು ಬಿಜೆಪಿ ಕಪಿಮುಷ್ಠಿಯಲ್ಲಿದ್ದ ಶಿಗ್ಗಾಂವಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುವ ಮೂಲಕ ಕಾಂಗ್ರೆಸ್ ಬಾವುಟ ಹಾರಿಸಿದೆ. ಉಪಚುನಾವಣೆಯಲ್ಲಿ ಕನಿಷ್ಠ ಎರಡು ಕ್ಷೇತ್ರಗಳನ್ನಾದರೂ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸದಲ್ಲಿದ್ದ ಎನ್‌ಡಿಎಗೆ ಭಾರೀ ನಿರಾಶೆಯಾಗಿದೆ.
ಸಂಡೂರಿನಲ್ಲಿ ಇ.ಅನ್ನಪೂರ್ಣ, ಶಿಗ್ಗಾಂವಿಯಲ್ಲಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹಾಗೂ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಅವರು ಜಯಭೇರಿ ಬಾರಿಸಿದ್ದಾರೆ.ಮೂರು ಕ್ಷೇತ್ರಗಳ ಪೈಕಿ ತೀವ್ರ ಕುತೂಹಲ ಮೂಡಿಸಿದ್ದ ಮತ್ತು ಜೆಡಿಎಸ್ ಪ್ರಭಾವ ಇರುವ ಚನ್ನಪಟ್ಟಣದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದು ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ವಿರುದ್ಧ ಭಾರೀ ಅಂತದಲ್ಲಿ ಸೋಲನುಭವಿಸಿದ್ದಾರೆ. 25 ಸಾವಿರಕ್ಕೂ ಹೆಚ್ಚಿನ ಮತಗಳ ಅಂತದಲ್ಲಿ ಯೋಗೇಶ್ವರ್ ವಿಜಯ ಪತಾಕೆ ಹಾರಿಸಿದ್ದಾರೆ.
ಮತ ಎಣಿಕೆ ಆರಂಭವಾದಾಗ ಮುನ್ನಡೆ ಕಾಯ್ದುಕೊಂಡಿದ್ದ ನಿಖಿಲ್ ಕುಮಾರಸ್ವಾಮಿ ಆರು ಸುತ್ತಿನವರೆಗೆ ಮುಂದಿದ್ದರು. ನಂತರದ ಸುತ್ತಿನ ಮತ ಎಣಿಕೆ ಬಳಿಕ ಮುನ್ನಡೆಗೆ ಬಂದ ಸಿ.ಪಿ.ಯೋಗೇಶ್ವರ್ ಅಂತಿಮ ಸುತ್ತಿನವರೆಗೆ ಪ್ರತಿ ಸುತ್ತಿಗೂ ಅಂತರ ಹೆಚ್ಚು ಮಾಡಿಕೊಂಡು ಗೆಲುವಿನ ದಡ ಸೇರಿದರು. ನಿಖಿಲ್ ಕುಮಾರಸ್ವಾಮಿ 87,229 ಮತಗಳನ್ನು ಪಡೆದುಕೊಂಡರೆ, ಸಿ.ಪಿ.ಯೋಗೇಶ್ವರ್ 1,12,642 ಮತಗಳನ್ನು ಗಳಿಸಿದ್ದಾರೆ. ಕಳೆದ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ 15 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರೆ, ಈ ಬಾರಿ ಸಿ.ಪಿ.ಯೋಗೇಶ್ವರ್ 25 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.ಅಂಚೆ ಮತಗಳನ್ನು ಪಡೆದುಕೊಳ್ಳುವಲ್ಲಿಯೂ ಸಿ.ಪಿ.ಯೋಗೇಶ್ವರ್ ಮುಂದಿದ್ದಾರೆ. ಯೋಗೇಶ್ವರ್ 254 ಅಂಚೆ ಮತಗಳನ್ನು ಪಡೆದುಕೊಂಡರೆ, ನಿಖಿಲ್ ಕುಮಾರಸ್ವಾಮಿ 198 ಮತಗಳನ್ನು ಗಳಿಸಿದ್ದಾರೆ. ಕ್ಷೇತ್ರದಲ್ಲಿ 31 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಕಾಂಗ್ರೆಸ್ ಮತ್ತು ಎನ್‌ಡಿಎ ಅಭ್ಯರ್ಥಿ ಹೊರತುಪಡಿಸಿದರೆ ಇನ್ನುಳಿದವರೆಲ್ಲಾ ಠೇವಣಿ ಕಳೆದುಕೊಂಡಿದ್ದಾರೆ.
ಶಿಗ್ಗಾವಿಯಲ್ಲಿ 30 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ಜಯ:ಶಿಗ್ಗಾಂವಿ ಕ್ಷೇತ್ರದಲ್ಲಿ 1994ರಲ್ಲಿ ಕೊನೆಯ ಬಾರಿ ಗೆಲುವು ಕಂಡಿದ್ದ ಕಾಂಗ್ರೆಸ್ 30 ವರ್ಷಗಳ ಬಳಿಕ ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸಂಸದರಾಗಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಅವರಿಗೆ ಮಗನ ಮೂಲಕ ಸೋಲಿನ ರುಚಿ ದೊರಕಿದೆ.
ಸ್ವಪಕ್ಷದ ಬಂಡಾಯ ಬಿಸಿ ನಡುವೆಯೇ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ತಮ್ಮ ಪ್ರತಿಸ್ಪರ್ಧಿ ಎನ್‌ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರನ್ನು 13448 ಮತಗಳ ಅಂತರದಲ್ಲಿ ಸೋಲುಣಿಸಿದ್ದಾರೆ. ಆರಂಭಿಕ ಹಂತದಲ್ಲಿ ಮುನ್ನಡೆಯಲ್ಲಿದ್ದ ಭರತ್ ಬೊಮ್ಮಾಯಿ ನಂತರ ಹಿನ್ನಡೆಗೆ ಸರಿದರು. ಯಾಸೀರ್ ಪಠಾಣ್ 1,00,756 ಮತಗಳನ್ನು ಪಡೆದುಕೊಂಡರೆ, ಭರತ್ ಬೊಮ್ಮಾಯಿ 87,308 ಮತಗಳನ್ನು ಗಳಿಸಿದ್ದಾರೆ. ಅಂಚೆ ಮತಗಳಲ್ಲಿ ಭರತ್ ಬೊಮ್ಮಾಯಿ ಅಧಿಕ ಮತಗಳನ್ನು ಪಡೆದುಕೊಂಡಿದ್ದಾರೆ. ಭರತ್ 348 ಅಂಚೆ ಮತ ಪಡೆದರೆ, ಯಾಸೀರ್ ಪಠಾಣ್ 169 ಅಂಚೆ ಮತಗಳನ್ನು ಪಡೆದುಕೊಂಡಿದ್ದಾರೆ.ಇನ್ನು, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದಿಂದ ಕಣಕ್ಕಿಳಿದಿದ್ದ ರವಿ ಕೃಷ್ಣಾರೆಡ್ಡಿ ಕೇವಲ 1,876 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನುಳಿದ ಐವರು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಸಂಡೂರು ಕೈ ಭದ್ರಕೋಟೆ:
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲ್ಲುವ ಮೂಲಕ ಇದು ಪಕ್ಷದ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ಇ.ತುಕಾರಾಂ ಅವರ ಸಂಘಟಿತ ಹೋರಾಟ ಅಭ್ಯರ್ಥಿ ಗೆಲುವಿಗೆ ಕಾರಣವಾಗಿದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಹೆಣೆದ ತಂತ್ರಗಾರಿಕೆ ಯಾವುದೇ ಫಲ ನೀಡಿಲ್ಲ.ಎನ್‌ಡಿಎ ಅಭ್ಯರ್ಥಿ ಬಂಗಾರ ಹನುಮಂತ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು 9,649 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಅನ್ನಪೂರ್ಣ ಅವರು 93,616 ಮತಗಳನ್ನು ಪಡೆದುಕೊಂಡರೆ ಬಂಗಾರು ಹನುಮಂತ 83,967 ಮತಗಳನ್ನು ಪಡೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿದರೂ ಕಳೆದ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾರಿ ಉತ್ತಮವಾಗಿ ಮತ ಗಳಿಕೆ ಮಾಡಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 85,223 ಮತಗಳನ್ನು ಗಳಿಸಿದ್ದರೆ, ಬಿಜೆಪಿ 49,701 ಮತಗಳನ್ನು ಪಡೆದುಕೊಂಡಿತ್ತು. ಈ ಬಾರಿ ಮತಗಳನ್ನು ಹೆಚ್ಚಿಸಿಕೊಂಡು ಬಿಜೆಪಿ ಎದುರಾಳಿಗೆ ಪೈಪೋಟಿ ನೀಡಿದೆ. ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಇನ್ನುಳಿದ ನಾಲ್ವರು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.