ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಕರ್ನಾಟಕ ಸಂಭ್ರಮ-50 ಹೆಸರಾಯಿತು- ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆಗೆ ಜಿಲ್ಲೆಯ ಗಡಿಭಾಗ ತಾಲೂಕಿನ ನಿಡಘಟ್ಟ ಗ್ರಾಮದ ಬಳಿ ಭಾನುವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು.ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಿಂದ ಬೆಳಗ್ಗೆ 10 ಗಂಟೆ ಸುಮಾರಿಗೆ ಗಡಿಭಾಗಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪ ವಿಭಾಗಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಕೆ.ಎಸ್.ಸೋಮಶೇಖರ್, ಜಿಲ್ಲಾ ಹಾಗೂ ತಾಲೂಕು ಆಡಳಿತ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಪುಷಾರ್ಚನೆಗೈದು ಆತ್ಮೀಯವಾಗಿ ಬರಮಾಡಿಕೊಂಡರು.
ನಂತರ ಜಾನಪದ ತಂಡಗಳ ಆಕರ್ಷಕ ಮೆರವಣಿಗೆಯೊಂದಿಗೆ ತಾಲೂಕಿನ ಸೋಮನಹಳ್ಳಿ, ಮದ್ದೂರು ಪಟ್ಟಣ್ಣಕ್ಕೆ ಆಗಮಿಸಿದ ರಥಯಾತ್ರೆ ವೇಳೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕೆಂಪು ಹಳದಿ ಸಾಲು ಧರಿಸಿಕೊಂಡು ಕೈಯಲ್ಲಿ ನಾಡಧ್ವಜ ಹಿಡಿದು ರಥದ ಹೆಜ್ಜೆ ಹಾಕಿದರು.ನಂತರ ಕೊಲ್ಲಿ ವೃತ್ತ, ಪೇಟೆಬೀದಿ, ಪ್ರವಾಸಿ ಮಂದಿರ ವೃತ್ತ ಹಾಗೂ ಬೆಂಗಳೂರು ಮೈಸೂರು ಹಳೆ ಹದ್ದಾರಿಯ ಮೂಲಕ ಶಿವಪುರದ ಕೊಪ್ಪ ಹೊಸ ಸರ್ಕಲ್ ಮೂಲಕ ಚಾಮನಹಳ್ಳಿಗೆ ತೆರಳಿತು. ರಥಯಾತ್ರೆ ಸಾಗಿದ ಮಾರ್ಗಮಧ್ಯೆ ಕನ್ನಡ ಪರ ಸಂಘಟನೆಗಳ ಮುಖಂಡರು, ಕನ್ನಡ ಅಭಿಯಾನಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಷೋದ್ಘಾರ ಮಾಡಿ ಸ್ವಾಗತಕೋರಿ ಕನ್ನಡ ಪರ ಘೋಷಣೆಗಳನ್ನು ಕೂಗಿ ಪುಷಾರ್ಚನೆಗೈದು ಹರ್ಷ ವ್ಯಕ್ತಪಡಿಸಿದರು.
ನಂತರ ಕನ್ನಡ ಜ್ಯೋತಿ ರಥಯಾತ್ರೆ ಸಾಗಿದ ಚಾಮನಹಳ್ಳಿ, ಬೆಸಗರಹಳ್ಳಿ ಅಡ್ಡ ರಸ್ತೆ, ಬೆಸಗರಹಳ್ಳಿ ತಲುಪಿತು. ಈ ವೇಳೆ ರಸ್ತೆಗಳ ಇಕ್ಕೆಲಗಳಲ್ಲಿ ನೆರೆದಿದ್ದ ಸ್ಥಳಿಯ ಸಂಸ್ಥೆಗಳ ಜನಪ್ರತಿನಿಧಿಗಳು, ಕನ್ನಡಾಭಿಮಾನಿಗಳು, ಗ್ರಾಮಸ್ಥರು ರಥಯಾತ್ರೆಗೆ ಹೂ ಮಳೆಗೈದು ವಿವಿಧ ಕಲಾತಂಡಗಳು, ಆಕರ್ಷಕ ಪ್ರದರ್ಶನೊಂದಿಗೆ ರಥಯಾತ್ರೆಗೆ ಮೆರಗು ನೀಡಿ ಸ್ವಾಗತ ನೀಡಿದರು.ಬಳಿಕ ಮಧ್ಯಾಹ್ನ ಕೊಪ್ಪ ಹೋಬಳಿ ಪ್ರವೇಶ ಮಾಡಿತು. ಮರಳಿಗ ಗ್ರಾಮದ ಮೂಲಕ ಸಂಜೆ ಕೊಪ್ಪ ಗ್ರಾಮಕ್ಕೆ ಅಗಮಿಸಿದ ರಥಯಾತ್ರೆ ವಾಸ್ತವ್ಯ ಹೂಡಿತು. ಆ.19 ಸೋಮವಾರ ರಥಯಾತ್ರೆ ನಾಗಮಂಗಲ ತಾಲೂಕಿಗೆ ಬೀಳ್ಕೊಡಲಾಗುವುದು ಎಂದು ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ತಿಳಿಸಿದರು.
ಈ ವೇಳೆ ಕಸಾಪ ಜಿಲ್ಲಾ ಸಂಚಾಲಕಿ ಮೀರಾಶಿವಲಿಂಗಯ್ಯ, ಗೌರವ ಕಾರ್ಯದರ್ಶಿಗಳಾದ ಪಣ್ಣೆದೊಡ್ಡಿ ಹರ್ಷ, ಹುಸ್ಕೂರು ಕೃಷ್ಣೇಗೌಡ, ಜಿಲ್ಲಾ ಸಹ ಕಾರ್ಯದರ್ಶಿ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ಕೆ.ಎಸ್.ಸುನೀಲ್ ಕುಮಾರ್, ಮಾಜಿ ಅಧ್ಯಕ್ಷ ಸಿ.ಅಪೂರ್ವಚಂದ್ರ, ಗ್ರಾಪಂ ಅಧ್ಯಕ್ಷೆ ಕೆ.ಪಿ.ಉಮಾ, ಮಾಜಿ ಅಧ್ಯಕ್ಷ ಎಂ.ಮಹೇಶ್, ಪಿಡಿಒ ಶೀಲಾ, ಮುಖಂಡರಾದ ವೆಂಕಟಚಲಯ್ಯ, ಪೊಲೀಸ್ ಸಿದ್ದರಾಜು, ತೈಲೂರು ಆನಂದಚಾರಿ, ಬಿಇಒ ಸಿ.ಎಚ್.ಕಾಳೀರಯ್ಯ, ತಾಪಂ ಇಒ ರಾಮಲಿಂಗಯ್ಯ, ಹಿಂದುಳದ ವರ್ಗಗಳ ಕಲ್ಯಾಣ ಇಲಾಖೆ ಮೇಲ್ವಿಚಾರಕ ಪ್ರಕಾಶ ಕುರ್ಜರ್ ಇತರರು ಇದ್ದರು.