ಸಾರಾಂಶ
ಜೆಡಿಎಸ್‌ನಿಂದ ಉಚ್ಛಾಟನೆಗೊಂಡ ಬಳಿಕ ನಾನು ಕಾಂಗ್ರೆಸ್ ಸೇರುವ ಬಗ್ಗೆ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದೆ. ‘ಅಯ್ಯಯ್ಯೋ... ದಯವಿಟ್ಟು ಸೇರಿಕೊಳ್ಳಿ. ನಿಮ್ಮ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ತುಂಬಾ ಇದೆ’ ಎಂದು ಸ್ವಾಗತ ಮಾಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
ವಿಧಾನಸಭೆಯಲ್ಲಿ ಎಸ್.ಎಂ. ಕೃಷ್ಣ ಅವರಿಗೆ ಸಂತಾಪ ಸೂಚಿಸುವ ನಿರ್ಣಯ ಉದ್ದೇಶಿಸಿ ಮಾತನಾಡಿದ ಅವರು, 2005ರಲ್ಲಿ ನನ್ನನ್ನು ಜೆಡಿಎಸ್‌ನಿಂದ ಉಚ್ಛಾಟನೆ ಮಾಡಿದ್ದರು. 2006ರಲ್ಲಿ ನಾನು ಹಾಗೂ ನನ್ನೊಂದಿಗೆ ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಬಿ.ಆರ್. ಪಾಟೀಲ್, ಸತೀಶ್ ಜಾರಕಿಹೊಳಿ, ಮಂಚನಹಳ್ಳಿ ಮಹದೇವ್, ಎ.ಕೆ. ಸುಬ್ಬಯ್ಯ ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದೆವು. ಆಗ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ನನ್ನ ತೀರ್ಮಾನ ತಿಳಿಸಿದ್ದೆ. ಅವರ ಅವರು ನನ್ನ ತೀರ್ಮಾನವನ್ನು ಮುಕ್ತವಾಗಿ ಸ್ವಾಗತಿಸಿದ್ದರು ಎಂದು ಹೇಳಿದರು.ನಾನು ವಿದ್ಯಾರ್ಥಿ ಆಗಿದ್ದಾಗ ಎಸ್.ಎಂ. ಕೃಷ್ಣ ಅವರು ಕರೆದಿದ್ದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಸಭೆಯಲ್ಲಿ ಭಾಗವಹಿಸಿದ್ದೆ. ಎಸ್.ಎಂ. ಕೃಷ್ಣ ಅವರು 1962ರಲ್ಲೇ ಸ್ವತಂತ್ರವಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ಡಿ.ಬಿ. ಚಂದ್ರೇಗೌಡ, ಆಯನೂರು ಮಂಜುನಾಥ್ ರೀತಿ ವಿಧಾನಸಭೆ, ವಿಧಾನಪರಿಷತ್, ರಾಜ್ಯಸಭೆ, ಲೋಕಸಭೆ ನಾಲ್ಕೂ ಸದನಗಳ ಸದಸ್ಯರಾಗಿದ್ದರು. ರಾಜ್ಯದ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಕೇಂದ್ರ ಸಚಿವ ಹಾಗೂ ರಾಜ್ಯಪಾಲರೂ ಆಗಿದ್ದ ಅಪರೂಪದ ರಾಜಕಾರಣಿ ಎಂದು ಕೊಂಡಾಡಿದರು.
ದ್ವೇಷದ ರಾಜಕಾರಣ ಮಾಡಿರಲಿಲ್ಲ:ಅವರು ಒಳ್ಳೆಯ ವಾಗ್ಮಿ, ಸಂಸದೀಯ ಪಟು, ದೀರ್ಘವಾದ ರಾಜಕೀಯ ಅನುಭವ ಉಳ್ಳವರು. ಅಷ್ಟು ಸುದೀರ್ಘ ರಾಜಕೀಯ ಅನುಭವದಲ್ಲಿ ಯಾರ ಮೇಲೂ ದ್ವೇಷ, ಸೇಡಿನ ರಾಜಕಾರಣ ಮಾಡಿರಲಿಲ್ಲ. ಎಲ್ಲರನ್ನೂ ಪ್ರೀತಿಸುತ್ತಿದ್ದ ಅಪರೂಪದ ವ್ಯಕ್ತಿ. ಅವರ ಕಾಲದಲ್ಲೇ ರಾಜ್‌ಕುಮಾರ್ ಅಪಹರಣ ಸೇರಿ ಹಲವು ಸವಾಲು ನಿಭಾಯಿಸಿದ್ದರು ಎಂದರು.
ಸಿಲಿಕಾನ್ ಸಿಟಿ ಹೆಗ್ಗಳಿಕೆಗೆ ಕೃಷ್ಣ ಕಾರಣ:ಬೆಂಗಳೂರನ್ನು ಸಿಂಗಾಪುರದಂತೆ ಅಭಿವೃದ್ಧಿ ಮಾಡಬೇಕು ಎನ್ನುವ ಉದ್ದೇಶ ಹೊಂದಿದ್ದರು. ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲಿಲ್ಲ. ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎನ್ನುವ ಹೆಗ್ಗಳಿಕೆ ಹಾಗೂ ಅಂತರಾಷ್ಟ್ರೀಯ ಖ್ಯಾತಿ ಬರಲು ಎಸ್.ಎಂ. ಕೃಷ್ಣ ಅವರ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಕ್ಸ್...ಉಪ್ಪು ಖಾರ ಹಾಕಿ ಹೇಳ್ತಿದ್ದಾನೆ: ಸಿಎಂ
ಸಂಪಾತ ಸೂಚನೆ ಚರ್ಚೆ ವೇಳೆ ಸಿದ್ದರಾಮಯ್ಯ ಅವರು, ‘ನಾನು ಹಾಗೂ ಮಹದೇವಪ್ಪ ಅವರು ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಲು ಮಹಾರಾಷ್ಟ್ರಕ್ಕೆ ತೆರಳಿದ್ದೆವು. ನೆನಪಿದ್ಯಾ ಮಹದೇವಪ್ಪ’ ಎಂದು ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಪ್ರಶ್ನಿಸಿದರು.ಈ ವೇಳೆ ಮಹದೇವಪ್ಪ, ಹೌದು ಸರ್ ನಾನು, ನೀವು, ಸಿ.ಎಂ. ಇಬ್ರಾಹಿಂ ಹೋಗಿದ್ದೆವು. ಆಗ ಎಸ್.ಎಂ. ಕೃಷ್ಣ ಅವರು ‘ಸಿದ್ದರಾಮಯ್ಯ ಶುಡ್ ಜಾಯಿನ್ ಕಾಂಗ್ರೆಸ್. ಇಟ್ ಈಸ್ ಹಿಸ್ಟಾರಿಕಲ್ ನೆಸಸಿಟಿ’ ಎಂದು ಹೇಳಿದ್ದರು ಎಂದು ನೆನಪಿಸಿದರು.
ಆಗ ಸಿದ್ದರಾಮಯ್ಯ, ‘ಅದು ಹೇಳಿರೋದು ನೆನಪಿಲ್ಲ ನನಗೆ. ಇವ ಉಪ್ಪು ಖಾರ ಸೇರಿಸಿ ಹೇಳ್ತಿದಾನೆ’ ಎಂದು ಮಹದೇವಪ್ಪ ಹೇಳಿದ್ದನ್ನು ನಿರಾಕರಿಸಿದರು.