ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕರ್ನಾಟಕ ದಲಿತ ಚಳುವಳಿಗೆ ಐವತ್ತು ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ ಆಚರಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಈ ಸಮಿತಿಯ ನೇತೃತ್ವದಲ್ಲಿ ಅಕ್ಟೋಬರ್ 20 ರಂದು ವಿಚಾರ ಸಂಕಿರಣ ಹಾಗೂ ಡಿಸೆಂಬರ್ 16 ರಂದು ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮಾಚರಣೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಬಿ.ಕೆ. ವಸಂತ್ ಬೆಳ್ತಂಗಡಿ ಹೇಳಿದರು.ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 70ರ ದಶಕದ ಆರಂಭದಲ್ಲಿ ಪ್ರೊ.ಬಿ. ಕೃಷ್ಣಪ್ಪ ಅವರ ನಾಯಕತ್ವ ಮತ್ತು ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂಬ ಹೆಸರಿನಲ್ಲಿ ರಾಜ್ಯದಲ್ಲಿ ಜನ್ಮತಾಳಿದ ದಲಿತ ಚಳುವಳಿಗೆ ಅರ್ಧ ಶತಮಾನ ತುಂಬುತ್ತಿದೆ. ಇದರ ಸುವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸಮುದಾಯ ಪಕ್ಷ, ಸಂಘಟನೆಗಳ ಬೇಧವಿಲ್ಲದೆ ಗ್ರಾಮವಾರು, ಸಮುದಾಯವಾರು, ಪಕ್ಷವಾರು ಮುಖಂಡರು, ಯುವ ಕಾರ್ಯಕರ್ತರನ್ನೊಳಗೊಂಡ ಪೂರ್ಣ ಪ್ರಮಾಣದ ಸಮಿತಿಯನ್ನು ರಚಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲ್ಲೂಕಿನ ದಲಿತ ಚಳುವಳಿ ನಡೆದು ಬಂದ ಹಾದಿಯ ಅವಲೋಕನ ನಡೆಯಲಿದೆ ಎಂದರು. ಕಾರ್ಯಕ್ರಮದ ದಿನ ಬೃಹತ್ ಮೆರವಣಿಗೆ, ಸಮಾವೇಶ ನಡೆಯಲಿದ್ದು, ತಾಲೂಕಿನಾದ್ಯಂತ ದಲಿತ ಚಳುವಳಿಯನ್ನು ಕಟ್ಟಲು ಶ್ರಮಿಸಿ ಅಗಲಿದ ಅನೇಕ ಹಿರಿಯ ಚೇತನಗಳ ಸ್ಮರಣೆ, ಹಿರಿಯ ನಾಯಕರಿಗೆ, ಕಾರ್ಯಕರ್ತರಿಗೆ ಗೌರವಾರ್ಪಣೆ ನಡೆಯಲಿದೆ. ಕಾರ್ಯಕ್ರಮದ ಮೊದಲ ಹಂತವಾಗಿ ಅಕ್ಟೋಬರ್ 20ರಂದು ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಸಮಿತಿಯ ಮಾಧ್ಯಮ ಸಲಹೆಗಾರ ರಘು ಧರ್ಮಸೇನ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಚೆನ್ನಕೇಶವ, ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ, ಎಸ್. ಬೇಬಿ ಸುವರ್ಣ ಸೋಣಂದೂರು, ನೇಮಿರಾಜ್ ಕಿಲ್ಲೂರು, ರಮೇಶ್ ಆರ್. ಬೆಳ್ತಂಗಡಿ, ಉಪಾಧ್ಯಕ್ಷ ಜಯಾನಂದ ಪಿಲಿಕಳ, ವೆಂಕಣ್ಣ ಕೊಯ್ಯೂರು, ಪಿ.ಕೆ. ರಾಜು ಪಡಂಗಡಿ, ರವಿ ಕುಮಾರ್ ಮುಂಡಾಜೆ, ಚಂದ್ರಾವತಿ ಉಜಿರೆ, ಗೌರವ ಸಲಹೆಗಾರರಾದ ಈಶ್ವರ ಬೈರ ಲಾಯಿಲ, ಪದ್ಮನಾಭ ಗರ್ಡಾಡಿ, ಬಾಬು ಎಂ. ಬೆಳಾಲು, ಸವಿತಾ ಎನ್. ಅಂಟ್ರಿಂಜೆ ಸುಳ್ಕೇರಿ, ಕೂಸ ಅಳದಂಗಡಿ, ಶಿವಪ್ಪ ಗರ್ಡಾಡಿ, ಮಾಧ್ಯಮ ಸಲಹೆಗಾರ ಶೇಖರ ಎಲ್ ಲಾಯಿಲ ಇದ್ದರು.