ಜಿಲ್ಲೆ ಎಲ್ಲ ತಾಲೂಕಿನ ಸರ್ಕಾರಿ ಹೆಚ್ಚುವರಿ, ಪರಂಪೂಕ್ ಖರೀಜ್ ಖಾತಾ ಇತರ ಭೂಮಿಗಳನ್ನು ಭೂ ಮಂಜೂರಾತಿ, ಭೂ ಸಮಸ್ಯೆಗಳ ಪರಿಹಾರ, ಬರ ನಿರ್ವಹಣೆ, ಸಾಲಮನ್ನಾ ಸಹಿತ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿಯಿಂದ ಅಹೋರಾತ್ರಿ ಧರಣಿಯನ್ನು ಸೋಮವಾರ ನಡೆಯಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆ ಎಲ್ಲ ತಾಲೂಕಿನ ಸರ್ಕಾರಿ ಹೆಚ್ಚುವರಿ, ಪರಂಪೂಕ್ ಖರೀಜ್ ಖಾತಾ ಇತರ ಭೂಮಿಗಳನ್ನು ಭೂ ಮಂಜೂರಾತಿ, ಭೂ ಸಮಸ್ಯೆಗಳ ಪರಿಹಾರ, ಬರ ನಿರ್ವಹಣೆ, ಸಾಲಮನ್ನಾ ಸಹಿತ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಕರ್ನಾಟಕ ರೈತ ಸಂಘ (ಕೆಆರ್‌ಎಸ್ ಎಐಯುಕೆಎಸ್) ಜಿಲ್ಲಾ ಸಮಿತಿಯಿಂದ ಅಹೋರಾತ್ರಿ ಧರಣಿಯನ್ನು ಸೋಮವಾರ ನಡೆಯಿತು.ಸ್ಥಳೀಯ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಹೋರಾಟ ನಡೆಸಿದ ಸಮಿತಿ ಮುಖಂಡರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸರ್ಕಾರಿ ಭೂಮಿಗೆ ಮಂಜೂರಾತಿ ದೊರೆಯದಂತೆ ಅನಗತ್ಯ ನಿಯಮಗಳನ್ನು ರೂಪಿಸುವ ಮೂಲಕ ಅಕ್ರಮ-ಸಕ್ರಮ ಕಾಯ್ದೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡಲಾಗಿದೆ. ರಾಜ್ಯದಲ್ಲಿ ಬರ ಘೋಷಣೆಗೆ ಅನುಸರಿಸುತ್ತಿರುವ ಮಾನದಂಡಗಳು ಅವೈಜ್ಞಾನಿಕವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಉದ್ದೇಶದಿಂದ ಇಂತಹ ಮಾನದಂಡಗಳನ್ನು ರೂಪಿಸಿವೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಮಳೆಯ ಕೊರತೆ ಹಾಗೂ ತೀವ್ರ ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಬಡವರು ಮತ್ತು ಕೂಲಿಕಾರರಿಗೆ ಪರಿಹಾರ ಕಲ್ಪಿಸಬೇಕು, ರೈತರು, ಬಡವರು, ಕೂಲಿಕಾರರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಮೈಕ್ರೋ ಫೈನಾನ್ಸ್ ಸಾಲಗಳನ್ನು ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷಪೂರ್ತಿ ಕೆಲಸ ನೀಡಬೇಕು. ವಿ.ಬಿ. ರಾಮಜಿ ಯೋಜನೆಯ ಎಲ್ಲ ನಿಯಮಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.ಬರಪೀಡಿತ ಪ್ರದೇಶಗಳ ರೈತರಿಗೆ ಎಕರೆಗೆ 30 ಸಾವಿರದಿಂದ 50 ಸಾವಿರದವರೆಗೆ ಪರಿಹಾರಧನ ನೀಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ವರ್ಷಪೂರ್ತಿ ಉಚಿತ ಆಹಾರ ಧಾನ್ಯ ವಿತರಿಸಬೇಕು ಸೇರಿದಂತೆ ರೈತರ ಪರವಾದ ಒಟ್ಟು 24 ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಯುಕೆಎಸ್ ರಾಷ್ಟ್ರೀಯ ಉಪಾಧ್ಯಕ್ಷ ಡಿ.ಎಚ್. ಪೂಜಾರ, ಉಪಾಧ್ಯಕ್ಷ ಶೇಖರಯ್ಯ ಗೆಜ್ಜಲಗಟ್ಟ, ಜಿಲ್ಲಾಧ್ಯಕ್ಷ ಅಶೋಕ ನೀಲಗಲ್, ಮುಖಂಡರಾದ ರಮೇಶ್ ಪಾಟೀಲ್ ಬೇರಗಿ, ಚಿಟ್ಟಿಬಾಬು, ಬಿ.ಎನ್. ಯರದಿಹಾಳ, ಹುಲಿಗಪ್ಪ ಸಿರವಾರ, ದುರುಗಪ್ಪ ಗಲಗ್, ಗೌಸ್‌ಖಾನ್ ಗುಂತಗೋಳ್, ಶಿವರಾಜ್ ಕೊನ್ನಾಪುರ ಪೇಟೆ, ವೀರೇಶ ನಾಯಕ, ಯಲ್ಲಪ್ಪ ರಾಯದುರ್ಗ, ನಾಗರಾಜ ಸಿರವಾರ, ಹನುಮಂತ ಸಿರವಾರ, ಜಯಮ್ಮ, ಜ್ಯೋತಿ, ರೇಣುಕಾ, ಸೇರಿ ಅನೇಕರು ಪಾಲ್ಗೊಂಡಿದ್ದರು.