ಸಾರಾಂಶ
ಮಂಗಳೂರಲ್ಲಿ ಮುಖ್ಯಮಂತ್ರಿಯಿಂದ ಚಾಲನೆ । ಉಡುಪಿಯಲ್ಲಿ ಸಮಾರೋಪ
ಕನ್ನಡಪ್ರಭ ವಾರ್ತೆ ಮಣಿಪಾಲರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಮತ್ತು ಉಡುಪಿ- ದ.ಕ. ಜಿಲ್ಲಾಡಳಿತಗಳ ಸಂಯುಕ್ತ ಆಶ್ರಯದಲ್ಲಿ ಜ.17ರಿಂದ 23ರ ವರೆಗೆ ಉಡುಪಿ ಮತ್ತು ಮಂಗಳೂರಲ್ಲಿ ಕರ್ನಾಟಕ ಕ್ರೀಡಾಕೂಟ-2025 ನಡೆಯಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಈ ಕ್ರೀಡಾಕೂಟ 25 ವಿಭಾಗಗಳಲ್ಲಿ 3247 ಕ್ರೀಡಾಪಟುಗಳು, 599 ಅಧಿಕಾರಿಗಳು ಮತ್ತು ಸಂಘಟಕರು ಸೇರಿ ಒಟ್ಟು 4250 ಮಂದಿ ಭಾಗವಹಿಸಲಿದ್ದಾರೆ. 12 ಕ್ರೀಡಾ ಸ್ಪರ್ಧೆಗಳು ಮಂಗಳೂರಿನಲ್ಲಿ ನಡೆದರೆ, 11 ಕ್ರೀಡಾ ಸ್ಪರ್ಧೆಗಳು ಉಡುಪಿಯಲ್ಲಿ ಮತ್ತು ಮಣಿಪಾಲದಲ್ಲಿ ನಡೆಯಲಿವೆ ಎಂದರು.ಈ ಕ್ರೀಡಾಕೂಟದಲ್ಲಿ ಒಟ್ಟು 631 ಚಿನ್ನ, 631 ಬೆಳ್ಳಿ ಹಾಗೂ 827 ಕಂಚಿನ ಪದಕಗಳಿಗಾಗಿ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ.ಉದ್ಘಾಟನಾ ಸಮಾರಂಭವು ಜ.17ರಂದು ಸಂಜೆ ಮಂಗಳೂರಿನಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಟವನ್ನು ಉದ್ಘಾಟಿಸಲಿದ್ದಾರೆ.
ಉಡುಪಿಯಲ್ಲಿ 23ರಂದು ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನಸಭಾ ಸ್ವೀಕರ್ ಯು.ಟಿ. ಖಾದರ್ ಭಾಗವಹಿಸಲಿದ್ದಾರೆ.ಈ ಕ್ರೀಡಾಕೂಟಕ್ಕಾಗಿ ಉಡುಪಿ ಜಿಲ್ಲಾ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕನ್ನು 30 ಲಕ್ಷ ರು. ವೆಚ್ಚದಲ್ಲಿ ದುರಸ್ಥಿಗೊಳಿಸಲಾಗಿದೆ. ಸುಮಾರು 700 ಮಂದಿ ಕ್ರೀಡಾಪಟುಗಳ ಊಟೋಪಚಾರ, ವಸತಿ ವ್ಯವಸ್ತೆಯನ್ನು ಮಣಿಪಾಲ ಮಾಹೆ ವಹಿಸಿಕೊಂಡಿದೆ. ಕ್ರೀಡಾಂಗಣ, ಸುತ್ತಮುತ್ತ ಮತ್ತು ಕ್ರೀಡಾಪಟುಗಳ ವಸತಿ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಎಸ್ಪಿ ಡಾ.ಅರುಣ್ ಕುಮಾರ್, ಜಿಲ್ಲ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಮಾಹೆಯ ಕುಲಸಚಿವ ಡಾ.ರವಿರಾಜ್, ಕ್ರೀಡಾಕಾರ್ಯದರ್ಶಿ ಡಾ. ವಿನೋದ್ ನಾಯಕ್ ಮುಂತಾದವರಿದ್ದರು.---------------ಉಡುಪಿ, ಮಣಿಪಾಲ, ಬ್ರಹ್ಮಾವರದಲ್ಲಿ ನಡೆಯುವ ಸ್ಪರ್ಧೆ
ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬಾಕ್ಸಿಂಗ್, ಸ್ಲೈಕ್ಲಿಂಗ್, ಜೂಡೋ, ಕಬಡ್ಡಿ, ಕುಸ್ತಿ. ಬ್ರಹ್ಮಾವರ ಸ್ವರ್ಣ ನದಿಯಲ್ಲಿ ಕಯಾಕಿಂಗ್ - ಕನೊಯಿಂಗ್. ಮಣಿಪಾಲ ಮಾಹೆ ಮೈದಾನದಲ್ಲಿ ಹಾಕಿ, ಲಾನ್ ಟೆನ್ನಿಸ್, ಟೇಬಲ್ ಟೆನ್ನಿಸ್, ಮಣಿಪಾಲದ ಎಂಜೆಸಿ ಮೈದಾನದಲ್ಲಿ ಅರ್ಚರಿ ಸ್ಪರ್ಧೆಗಳು ನಡೆಯಲಿವೆ.ಉಡುಪಿ ಜಿಲ್ಲೆಯಲ್ಲಿ ಒಟ್ಟು 11 ಕ್ರೀಡಾಸ್ಪರ್ಧೆಗಳು ನಡೆಯಲಿವೆ. ಅವುಗಳಲ್ಲಿ 1373 ಕ್ರೀಡಾಪಟುಗಳು, 250 ತಾಂತ್ರಿಕ ಅಧಿಕಾರಿಗಳು ಸೇರಿ ಒಟ್ಟು 1633 ಮಂದಿ ಭಾಗವಹಿಸಲಿದ್ದಾರೆ.