ಸಾರಾಂಶ
ಸಿದ್ದಗಂಗಾ ಮಠಕ್ಕೆ ನೀರು ಸರಬರಾಜು ಮಾಡಿದ ಸಂಬಂಧ 70,31,438 ರು. ವಿದ್ಯುತ್ ಬಿಲ್ ಪಾವತಿಸುವಂತೆ ಕೆಐಎಡಿಬಿ ನೋಟಿಸ್ ಜಾರಿ ಮಾಡಿದೆ. ಮಠದಿಂದ ನೀರಿನ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.
ತುಮಕೂರು : ಸಿದ್ದಗಂಗಾ ಮಠಕ್ಕೆ ನೀರು ಸರಬರಾಜು ಮಾಡಿದ ಸಂಬಂಧ 70,31,438 ರು. ವಿದ್ಯುತ್ ಬಿಲ್ ಪಾವತಿಸುವಂತೆ ಕೆಐಎಡಿಬಿ ನೋಟಿಸ್ ಜಾರಿ ಮಾಡಿದೆ. ಸಿದ್ಧಗಂಗಾ ಮಠದ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿರುವ ಕಾರಣ ಮಠದಿಂದ ನೀರಿನ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.
ತುಮಕೂರು ತಾಲೂಕಿನ ಹೊನ್ನೇನಹಳ್ಳಿ ಸಿದ್ಧಗಂಗಾ ಮಠದ ಸನಿಹದಲ್ಲೇ ಇರುವ ದೇವರಾಯಪಟ್ಟಣ ಕೆರೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದ ಪೈಪ್ ಲೈನ್ ಮೂಲಕ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ನೀರು ಹರಿಸಲಾಗಿತ್ತು. ಅಷ್ಟೇ ಅಲ್ಲದೆ ಮಠದ ದಿನನಿತ್ಯ ಕಾರ್ಯಗಳಿಗೆ ಇದೇ ಕೆರೆ ನೀರು ಬಳಸಿಕೊಳ್ಳಲಾಗಿದೆ. ಈ ನೀರು ಪೂರೈಕೆ ಸಂಬಂಧ ಕಳೆದ ಏಪ್ರಿಲ್ 6 ರಂದು 70,31,438 ರು. ವಿದ್ಯುತ್ ಬಿಲ್ ಕಟ್ಟುವಂತೆ ನೋಟಿಸ್ ಕಳುಹಿಸಲಾಗಿತ್ತು. ಆದರೆ ಈ ಬಗ್ಗೆ ಸಿದ್ಧಗಂಗಾ ಮಠದ ಆಡಳಿತ ಸಿಬ್ಬಂದಿ ತಲೆ ಕೆಡಿಸಿಕೊಳ್ಳದ ಹಿನ್ನೆಲೆ ಮರು ನೋಟಿಸ್ ಜಾರಿಗೊಳಿಸಲಾಗಿದೆ.
ಮಂಡಳಿಯ ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ಈ ವಿದ್ಯುತ್ ಬಿಲ್ ಅನ್ನು ನೀವು ಭರಿಸಲು ಕೋರಲಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಕೆರೆ ನೀರು ಬಳಸಿಲ್ಲ: ಸಿದ್ಧಲಿಂಗ ಶ್ರೀ
ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳು ಕೆರೆ ನೀರನ್ನು ಸಿದ್ಧಗಂಗಾ ಮಠ ಬಳಸಿಲ್ಲ ಎಂದಿದ್ದಾರೆ. ಕೆರೆಯ ನೀರು ಶುದ್ಧೀಕರಣ ಘಟಕ ಇನ್ನು ನಿರ್ಮಾಣ ಹಂತದಲ್ಲಿದೆ. ಇದು ಕರ್ನಾಟಕ ಸರ್ಕಾರ ಪ್ರಾಯೋಜಿತ ಸಿದ್ಧಗಂಗಾ ಮಠದ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯಾಗಿದ್ದು ಮಠ ನೀರಿನ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಸರ್ಕಾರವೇ ಈ ಯೋಜನೆಗೆ ಪ್ರತ್ಯೇಕವಾಗಿ ಬಜೆಟ್‌ನಲ್ಲಿ ಹಣದ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ.
ನೋಟಿಸ್ ವಾಪಸ್‌ಗೆ ಕ್ರಮ: ಎಂಬಿಪಾ ಭರವಸೆ
ವಿಧಾನಸೌಧ: ಸಿದ್ಧಗಂಗಾ ಮಠಕ್ಕೆ ನೀಡಿರುವ ಕೆಐಎಡಿಬಿ ನೀಡಿದ ನೋಟಿಸ್ ಅನ್ನು ಹಿಂಪಡೆಯಲಾಗುವುದು ಎಂದು ತಿಳಿಸಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಮುಂದಿನ ದಿನಗಳಲ್ಲಿ ಮಠಕ್ಕೆ ಉಚಿತವಾಗಿ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ಧಗಂಗಾ ಮಠದ ಬಳಿ ಕೆಐಎಡಿಬಿಗೆ ಸೇರಿದ ಕೆರೆ ಇದೆ.
ಆ ಕೆರೆಯಿಂದ ನೀರನ್ನು ಮಠದವರು ತೆಗೆದುಕೊಂಡಿದ್ದರು. ಅದಕ್ಕೆ ಬಿಲ್ ಪಾವತಿಸುವಂತೆ ನೋಟಿಸ್ ನೀಡಲಾಗಿತ್ತು. ಸಿದ್ದಗಂಗಾ ಮಠವು ವಿಶ್ವಕ್ಕೆ ಮಾದರಿಯಾದ ಮಠ. ಹತ್ತು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದೆ. ಬಸವಣ್ಣರ ತತ್ವದಡಿ ದಾಸೋಹ ಮಾಡುತ್ತಿರುವ ಮಠ ಇದಾಗಿದೆ. ಮಠವು ನೀರು ಪಡೆದುಕೊಂಡರೂ ತಪ್ಪಲ್ಲ. ಇಲಾಖೆಯ ಮುಖ್ಯ ಅಭಿಯಂತರರು ಮಠದ ಜೊತೆ ಮಾತನಾಡಿದ್ದಾರೆ ಎಂದರು.