ಸಾರಾಂಶ
ರಾಜ್ಯದಲ್ಲೀಗ ನಿಮ್ಮ ಪರವಾಗಿ ನಿಂತು ನಿಮಗೆ ರಕ್ಷಣೆ ನೀಡುವ ಸರ್ಕಾರ ಇದೆ. ಹಿಂದೊಮ್ಮೆ ನಾನು ‘ಮುಸ್ಲಿಂ ಬಾಂಧವರು ಸೋದರರು’ ಎಂದಿದ್ದಕ್ಕೆ ಟೀಕೆ ಮಾಡಿದರು. ಅದಕ್ಕೆಲ್ಲ ಈ ಕನಕಪುರ ಬಂಡೆ ಹೆದರಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದಲ್ಲೀಗ ನಿಮ್ಮ ಪರವಾಗಿ ನಿಂತು ನಿಮಗೆ ರಕ್ಷಣೆ ನೀಡುವ ಸರ್ಕಾರ ಇದೆ. ಹಿಂದೊಮ್ಮೆ ನಾನು ‘ಮುಸ್ಲಿಂ ಬಾಂಧವರು ಸೋದರರು’ ಎಂದಿದ್ದಕ್ಕೆ ಟೀಕೆ ಮಾಡಿದರು. ಅದಕ್ಕೆಲ್ಲ ಈ ಕನಕಪುರ ಬಂಡೆ ಹೆದರಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನ ಮೈದಾನದಲ್ಲಿ ಬುಧವಾರ ನಡೆದ ಸುನ್ನಿ ಯುವಜನ ಸಂಘಟನೆ (ಎಸ್.ವೈ.ಎಸ್)ಯ 30ನೇ ವರ್ಷದ ಮಹಾಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ನಿಮ್ಮ ಪರ ನಿಂತುಕೊಂಡಿದೆ, ಮುಂದೆಯೂ ನಿಂತುಕೊಳ್ಳಲಿದೆ ಎಂದು ಭರವಸೆ ನೀಡಿದರು.
ನಮ್ಮದು ಎಲ್ಲ ಜಾತಿ, ಧರ್ಮ, ವರ್ಗಗಳ ರಕ್ಷಣೆಗಾಗಿ ಇರುವ ಸರ್ಕಾರ. ಸಮಾಜದಲ್ಲಿ ಸೋದರತ್ವದ ಭಾವನೆ ಮುಂದುವರಿಯಬೇಕಾಗಿದೆ. ಕಳೆದ 10-12 ವರ್ಷಗಳಿಂದ ದೇಶವಾಳುತ್ತಿರುವ ಸರ್ಕಾರ ಜನರ ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾವು ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡಲಿದ್ದೇವೆ. ಮಾನವೀಯತೆ ಎತ್ತಿ ತೋರಿಸವ ಕೆಲಸ ಮಾಡಿಕೊಂಡು ಬಂದಿದ್ದೇವೆ, ಮುಂದೆಯೂ ಮಾಡಲಿದ್ದೇವೆ. ಈ ದೇಶ ಸರ್ವ ಜನರ ಆಸ್ತಿ. ನಮ್ಮ ನಮ್ಮ ಧರ್ಮ, ಆಚಾರ ವಿಚಾರದಲ್ಲಿ ಯಾರೂ ಬಾಯಿ ಹಾಕಬಾರದು ಎಂದರು.ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತದ ಅಧಿಕಾರ ನೀಡಿದ್ದೀರಿ. ಅದರಂತೆ ಎಲ್ಲ ವರ್ಗದ ಜನರಿಗೆ ನ್ಯಾಯ ನೀಡುವ ಕೆಲಸವನ್ನು ಸರ್ಕಾರ ಮಾಡಿಕೊಂಡು ಬಂದಿದೆ ಎಂದರು.
ಚುನಾವಣೆ ಇದೆ, ದೇಶ ರಕ್ಷಿಸಿ: ಶೀಘ್ರದಲ್ಲೇ ಚುನಾವಣೆ ಬರಲಿದೆ. ಇಲ್ಲಿ ಅದರ ಬಗ್ಗೆ ಮಾತನಾಡಲ್ಲ. ಆದರೆ, ದೇಶ ರಕ್ಷಣೆಯ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ನಿಮ್ಮ ಆಶೀರ್ವಾದ ನಮ್ಮ ಸರ್ಕಾರದ ಮೇಲಿರಲಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದರು.ಅನುದಾನ ಭರವಸೆ: ಅಲ್ಪಸಂಖ್ಯಾತರ ಅನುದಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.ಹಿಜಾಬ್ ವಸ್ತ್ರ ಸಂಹಿತೆ ವಾಪಸ್‌ಗೆ ಸರ್ಕಾರಕ್ಕೆ ಆಗ್ರಹ: ಶಾಲೆಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ವಾಪಸ್ ಪಡೆಯುವುದು, ಮಂಗಳೂರು ಗೋಲಿಬಾರ್‌ನಲ್ಲಿ ಮೃತರಾದ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡುವುದು, ಹಲವರ ಮೇಲೆ ಹಾಕಿರುವ ಸುಳ್ಳು ಕೇಸ್‌ಗಳನ್ನು ವಾಪಸ್ ಪಡೆಯಬೇಕು. ಬೆಂಗಳೂರಿನ ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆಯಲ್ಲಿ ಎಲ್ಲ ಜಾತಿಗಳ ಅಮಾಯಕರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುವ ಮನವಿಯನ್ನು ಸಮ್ಮೇಳನದಲ್ಲಿ ರಾಜ್ಯ ಸರ್ಕಾರದ ಮುಂದಿಡಲಾಯಿತು. ಮನವಿ ಪತ್ರವನ್ನು ಎ.ಪಿ.ಉಸ್ತಾದರು ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದರು.