ಸಾರಾಂಶ
ಕನ್ನಡಪ್ರಭ ವಾರ್ತೆ ಯರಗಟ್ಟಿ
ಕರ್ನಾಟಕವು ಗೋಧಿ ಬೇಸಾಯದಲ್ಲಿ ವೈವಿಧ್ಯತೆಯನ್ನು ಹೊಂದಿದ್ದು, ಶೇ.60 ರಷ್ಟು ಮಳೆಯಾಶ್ರಿತ ಹಾಗೂ ಶೇ.40 ರಷ್ಟು ನೀರಾವರಿ ಪ್ರದೇಶದಲ್ಲಿ ಗೋಧಿ ಬೆಳೆಯಲಾಗುತ್ತಿದೆ ಎಂದು ಕೃವಿವಿ ವಿಸ್ತರಣಾ ನಿರ್ದೇಶಕ ಡಾ.ಆರ್.ಬಸವರಾಜಪ್ಪ ಹೇಳಿದರು.ತಾಲೂಕಿನ ಸೋಪ್ಪಡ್ಲ ಗ್ರಾಮದ ರೈತ ರವೀಂದ್ರ ಕುರುಬಗಟ್ಟಿ ಹೊಲದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಇಲಾಖೆ ಸವದತ್ತಿ, ಟಿಎಸ್‌ಪಿ ಯೋಜನೆಯ ಅಡಿಯಲ್ಲಿ ಗೋಧಿ ಬೆಳಯ ಕ್ಷೇತ್ರೋತ್ಸವ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 3 ತಳಿಗಳಾದ ಚಪಾತಿ, ರವೆ ಹಾಗೂ ಕಪಲಿ (ಜವೆಗೋಧಿ) ತಳಿಗಳನ್ನು ಬೆಳೆಯುತ್ತಿದ್ದು, ನೀರಾವರಿ ಪ್ರದೇಶದಲ್ಲಿ ಶೇ.70 ರಷ್ಟು ಚಪಾತಿ ತಳಿ, ಶೇ.20 ರಷ್ಟು ರವೆ ತಳಿ ಹಾಗೂ ಶೇ.10 ರಷ್ಟು ಜವೆಗೋಧಿ ತಳಿಗಳು ಕಂಡುಬರುತ್ತವೆ ಎಂದು ಮಾಹಿತಿ ನೀಡಿದರು.ಕೃವಿವಿ ಸಹ ಸಂಶೋಧನಾ ನಿರ್ದೇಶಕ ಡಾ.ಪಿ.ಎಸ್.ಮತ್ತಿವಾಡೆ ಮಾತನಾಡಿ, ಗೋಧಿ ತಳಿಗಳಲ್ಲಿ ಯುಎಎಸ್ 347, ಯುಎಎಸ್ 345, ಯುಎಎಸ್ 446, ಯುಎಎಸ್ 478, ಡಿಡಬ್ಲೂಆರ್ 162 ಸೇರಿದಂತೆ ಅನೇಕ ಗೋಧಿ ತಳಿಗಳು ಬರುತ್ತವೆ. ಈ ತಳಿಯು ಚಪಾತಿ, ಹೋಳಿಗೆ, ಮೈದಾ ಹಾಗೂ ಬೇಕರಿ ಪದಾರ್ಥಗಳನ್ನು ತಯಾರಿಸಲು ಸೂಕ್ತವಾಗಿದೆ. ಇದು ಭಂಡಾರ ಹಾಗೂ ಎಲೆಮಚ್ಚೆ ರೋಗಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು.ಗೋಧಿ ತಳಿಗಳಿಗೆ ಎಲ್ಲೆ ಭಂಡಾರ ರೋಗ ಸಣ್ಣ ತತ್ತಿಯಾಕಾರದ ಕಂದು ಬಣ್ಣದ ಗುಳ್ಳೆಗಳು ಕೇವಲ ಎಲೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಇಂತಹ ಚುಕ್ಕೆಗಳು ಕ್ರಮೇಣ ಒಡೆದು ಕಿತ್ತಳೆ ಬಣ್ಣದ ದುಂಡಗಿನ ಬೀಜ ಕಣಗಳನ್ನು ಬಿಡುಗಡೆ ಮಾಡುವವು. ಕಪ್ಪು ಬಣ್ಣದ ಚುಕ್ಕೆಗಳು ಕೇವಲ ಎಲೆಯ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದ ಕಾಳಿನ ಗಾತ್ರ ಹಾಗೂ ಇಳುವರಿಯಲ್ಲಿ ಗಣನೀಯವಾದ ಕುಂಠಿತವನ್ನು ಕಾಣಬಹುದು ಎಂದರು.ಕೃಷಿ ಅಧಿಕಾರಿ ಎಂ.ಜಿ.ಕಳಸಪ್ಪನ್ನವರ, ಗ್ರಾಪಂ ಅಧ್ಯಕ್ಷೆ ಸತ್ಯೆವ್ವ ಗೋರಗುದ್ದಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿ.ಎಸ್.ಮುಲ್ಲಾ, ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಗೋಡಿ, ವಿರೂಪಾಕ್ಷ ಕೌಜಲಗಿ, ವಿ.ಎಂ.ಹೊಸೂರ, ಶಿಕ್ಷಕ ಆರ್.ಬಿ.ಹುಣಶ್ಯಾಳ, ರೈತರಾದ ವಿಠ್ಠಲ ಭಾಂಗಿ, ಶಿವಾನಂದ ಕರಿಗೊಣ್ಣವರ, ಮಹಾದೇವ ಯಂಡ್ರಾವಿ, ರವೀಂದ್ರ ಬೆಳವಲ, ಮಹಾರುದ್ರಪ್ಪ ಕಡಕೋಳ, ಬಸನಗೌಡ ಪಾಟೀಲ, ವೀರನಗೌಡ ಸರನಾಡಗೌಡ್ರ ಸೇರಿದಂತೆ ಅನೇಕ ರೈತರು ಇದ್ದರು.
ಗೋಧಿ ಬೆಳೆಯು ಒಂದು ಪ್ರಮುಖ ಹಿಂಗಾರಿ ಬೆಳೆ. ಇದರ ಸಾಗುವಳಿ ಹೆಚ್ಚಾಗಿ ಉತ್ತರ ಕರ್ನಾಟಕ ಪ್ರದೇಶ. ನಮ್ಮ ರಾಜ್ಯದಲ್ಲಿ 2.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಸರಿ ಸುಮಾರು 1.47 ಲಕ್ಷ ಟನ್ ಗೋಧಿ ಉತ್ಪಾದನೆಯಾಗುತ್ತಿದೆ.-ಡಾ.ಆರ್.ಬಸವರಾಜಪ್ಪ,
ಕೃವಿವಿ ವಿಸ್ತರಣಾ ನಿರ್ದೇಶಕರು.