ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಉತ್ತಮ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಇಡೀ ದೇಶದಲ್ಲೇ ಕರ್ನಾಟಕ ಅಗ್ರಗಣ್ಯವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಕೊಂಡಾಡಿದರು.
ಮಂಗಳವಾರ ನಗರದ ನಿಮ್ಹಾನ್ಸ್ ಸಮಾವೇಶ ಕೇಂದ್ರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 26ನೇ ಘಟಿಕೋತ್ಸವದಲ್ಲಿ 88 ವಿದ್ಯಾರ್ಥಿಗಳಿಗೆ 100 ಚಿನ್ನದ ಪದಕ ಮತ್ತು ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿನ ವೈದ್ಯಕೀಯ ಸೇವೆಗಳು ‘ವಿಶ್ವ ಆರೋಗ್ಯ ಸಂಸ್ಥೆ’ ನಿಗದಿಪಡಿಸಿರುವ ಮಾನದಂಡಗಳಿಗೆ ಅನುಸಾರವಾಗಿವೆ. ಈ ಸ್ಥಾನಕ್ಕೆ ಬರಲು ಕರ್ನಾಟಕ ಸರ್ಕಾರ ಮತ್ತು ಜನರ ಪರಿಶ್ರಮ ಗಣನೀಯವಾಗಿದೆ ಎಂದರು.
ವೈದ್ಯಕೀಯ ವಿಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿರುವ ಭಾರತದಲ್ಲಿ ಆರೋಗ್ಯ ಸೇವೆಯನ್ನು ಮಾನವೀಯತೆ ಮತ್ತು ದೈವಿಕ ನೆಲೆಯಲ್ಲಿ ಕಾಣಲಾಗುತ್ತದೆ.
ಮಹರ್ಷಿ ಚರಕ ಅವರನ್ನು ಭಾರತದ ಆಯುರ್ವೇದ ಮತ್ತು ಔಷಧದ ಪಿತಾಮಹ ಹಾಗೂ ಮಹರ್ಷಿ ಸುಶ್ರುತ ಅವರನ್ನು ಶಸ್ತ್ರಚಿಕಿತ್ಸೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ.
ವೈದ್ಯಕೀಯ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ. ಇದು ಭಾರತೀಯರ ಕಠಿಣ ಪರಿಶ್ರಮ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಪ್ರತಿಬಿಂಬವಾಗಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಮಾತನಾಡಿ, ರೋಗಿಗಳಿಗೆ ಮೌಲ್ಯ, ಸಹಾನುಭೂತಿ, ಗೌರವದಿಂದ ಸೇವೆ ನೀಡುವುದರ ಜೊತೆಗೆ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಹೊಸ ಜವಾಬ್ದಾರಿ, ಅವಕಾಶಗಳನ್ನು ವೈದ್ಯಕೀಯ ಸೇವಕರು ಸಮರ್ಥವಾಗಿ ಎದುರಿಸಬೇಕು ಎಂದು ಶುಭ ಹಾರೈಸಿದರು.
ನವದೆಹಲಿಯ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ.ಬಿ.ಎನ್. ಗಂಗಾಧರ್ ಮಾತನಾಡಿ, ಪ್ರತಿ 1,000 ಜನರಿಗೆ ಒಬ್ಬ ವೈದ್ಯ ಇರಬೇಕು ಎಂದು ಡಬ್ಲ್ಯುಎಚ್‌ಒ ಮಾನದಂಡ ನಿಗದಿಪಡಿಸಿದೆ.
ಕರ್ನಾಟಕದಲ್ಲಿ ಪ್ರತಿ 1,000 ಜನರಿಗೆ ಇಬ್ಬರು ವೈದ್ಯರಿದ್ದಾರೆ. ಇದು ಸಂತೋಷದ ಸಂಗತಿ. ಆದರೆ, ವೈದ್ಯರ ಲಭ್ಯತೆ ಮತ್ತು ಸೇವೆಯಲ್ಲಿ ಹಿಂದುಳಿದಿದ್ದು, ಸುಧಾರಣೆ ಕಾಣಬೇಕಿದೆ ಎಂದರು.
ದೇಶದಲ್ಲಿ ನರ್ಸ್‌ಗಳ ಕೊರತೆ ಇದೆ. ಹೀಗಾಗಿ, ಹೆಚ್ಚಿನ ನರ್ಸಿಂಗ್ ಕಾಲೇಜು ಮಂಜೂರು ಮಾಡುವ ಆಲೋಚನೆಯನ್ನು ಕೇಂದ್ರ ಸರ್ಕಾರ ಹೊಂದಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಜಾಗತಿಕ ಗುಣಮಟ್ಟವನ್ನು ತಲುಪಲು ಈಗ ಇರುವ ಮಾನವ ಸಂಪನ್ಮೂಲವನ್ನು ದುಪ್ಪಟ್ಟುಗೊಳಿಸುವ ಯೋಚನೆ ಇದೆ.
ಎಂಬಿಬಿಎಸ್ ಮತ್ತು ಎಂಡಿ ಸೀಟುಗಳನ್ನು ಹೆಚ್ಚಿಸಲಾಗುತ್ತಿದೆ. ವಿವಿಗಳು ಕೂಡ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಗಂಗಾಧರ್ ಸಲಹೆ ನೀಡಿದರು.ಕುಲಪತಿ ಡಾ.ಎಂ.ಕೆ. ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಪ್ರದಾನ
ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಕಿಡ್ನಿ ಡಯಾಲಿಸಸ್ ಸೇವೆ ವಿಸ್ತರಿಸಿದ ನಿವೃತ್ತ ವೈದ್ಯ ಡಾ. ಜಿ.ಕೆ. ವೆಂಕಟೇಶ್, ಚರ್ಮರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಡಾ.ಪಿ.ಎಂ. ಬಿರಾದಾರ್ ಮತ್ತು 40 ಸಾವಿರ ಪ್ರಕರಣಗಳಲ್ಲಿ ಲೇಸರ್ ಥೆರಪಿ ನೀಡಿದ ಫಿಸಿಯೋಥೆರಪಿಸ್ಟ್ ಡಾ. ಪಿಂಕಿ ಭಾಟಿಯಾ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪ್ರದಾನ ಮಾಡಲಾಯಿತು.
ವಿವಿಯಿಂದ 52,650 ಅಭ್ಯರ್ಥಿಗಳಿಗೆ ಪದವಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕದದಿಂದ ಪದವಿ, ಸ್ನಾತಕೋತ್ತರ ಪದವಿ ಸೇರಿ ಒಟ್ಟು 52,650 ಅಭ್ಯರ್ಥಿಗಳು ಪದವಿ ಪಡೆದುಕೊಂಡಿದ್ದಾರೆ. ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ಅವರ ಪುತ್ರಿ ಡಾ. ದಿಶಾ ಎಸ್. ಕುಮಾರ್ ಅವರು ಪೀಡಿಯಟ್ರಿಕ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು.