ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಸಾಂಸ್ಕೃತಿಕ ಮೌಲ್ಯಗಳನ್ನು ಬಿತ್ತಿ ಬೆಳೆಸಿದ ಕನ್ನಡ ಸಾಹಿತ್ಯದ ಸುವರ್ಣ ನೆಲ ಕರ್ನಾಟಕದಲ್ಲಿ ಜನಿಸುವುದೇ ಒಂದು ಪುಣ್ಯ. ಇಲ್ಲಿರುವ ಎಲ್ಲರೂ ಕನ್ನಡ ಅರಿತು ಮಾತನಾಡಿ ಮೌಲ್ಯಗಳನ್ನು ಅರ್ಥ ಮಾಡಿಕೊಂಡು ನಡೆಯುವಂತಾಗಬೇಕು ಎಂದು ನಾಡೋಜ ಡಾ.ಮಹೇಶ ಜೋಶಿ ಹೇಳಿದರು.ಸೋಮವಾರ ಇಲ್ಲಿನ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಸಂಭ್ರಮದ ವಾರ್ಷಿಕ ಯೋಜನೆ ಹಾಗೂ ವಿದ್ಯಾರ್ಥಿ ಒಕ್ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಬದುಕೊಂದು ಜೀವ ನದಿ. ಅದು ಸಾರ್ಥಕತೆಯತ್ತ ಸಾಗುತ್ತದೆ. ಪ್ರತಿಭೆಗೆ ಹಿನ್ನೆಲೆ ಬೇಕಾಗಿಲ್ಲ. ಮುನ್ನುಗ್ಗುವ ಛಲ ಬೇಕು. ಸೋಲನ್ನು ಗೆಲುವಿನ ಶಕ್ತಿ ಮಾಡಿಕೊಳ್ಳಬೇಕು. ಸವಾಲುಗಳನ್ನು ಸ್ವೀಕರಿಸಿ ಎದುರಿಸಿ ಜಯ ಗಳಿಸಬೇಕು. ಬಡವರನ್ನು ಪ್ರೀತಿಸಿ ಗೌರವಿಸುವುದರಲ್ಲೇ ಒಂದು ಆನಂದವಿದೆ. ಈ ದೇಶದಲ್ಲಿ ಎಲ್ಲರೂ ಒಂದೇ ಭಾವದಲ್ಲಿ ಬದುಕುವಂತಾಗಬೇಕು. ನಾವು ಮೊದಲು ಮಾನವರಾಗದಿದ್ದರೆ ಏನೂ ಆಗಲು ಸಾಧ್ಯವಿಲ್ಲ. ಯುವ ಶಕ್ತಿ ದೇಶಕ್ಕಾಗಿ ಸಮರ್ಪಿತರಾಗಿ ಬದುಕುವ ಸಂಕಲ್ಪ ಮಾಡಬೇಕು. ಕನ್ನಡದ ನೆಲದಲ್ಲಿ ಕನ್ನಡಿಯಂತೆ ಸ್ವಚ್ಛವಾಗಿ ಬದುಕುವ ಸಾರ್ಥಕ ಕ್ಷಣಗಳು ನಮ್ಮದಾಗಬೇಕು. ಕನ್ನಡದವನ್ನು ಪ್ರೀತಿಸಿ, ಗೌರವಿಸಿ, ಸಂಭ್ರಮಿಸಿ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಇಂದಿನ ಯುವ ಪೀಳಿಗೆ ಬಗೆಗೆ ಪೋಷಕರ ಬಹುತೇಕ ನಿರೀಕ್ಷೆಗಳು ಸುಳ್ಳಾಗುತ್ತಿವೆ. ಒಂದು ಕಾಲದಲ್ಲಿ ಶಿಕ್ಷಣಕ್ಕಾಗಿ ದೂರದ ಊರೂರು ಅಲೆಯಬೇಕಾಗಿತ್ತು. ಈಗ ಮನೆ ಬಾಗಿಲಿಗೆ ಶಿಕ್ಷಣ ಬಂದಿದೆ. ಶೈಕ್ಷಣಿಕ ಸೌಲಭ್ಯಗಳು ಅಂಗೈಯಲ್ಲಿ ಸಿಗುತ್ತವೆ. ಒಳ್ಳೆಯ ಗುರಿ ಹೊಂದಿ, ನಾಗರಿಕ ಸೌಲಭ್ಯ ಪಡೆದು ನಾಳೆಗೆ ಒಳ್ಳೆಯ ನಾಗರಿಕರಾಗಿ ಬಾಳುವ ಧ್ಯೇಯ ನಮ್ಮ ಯುವಕರದ್ದಾಗಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎಂ.ಎಚ್. ಹೊಳೆಯಣ್ಣನವರ, ವಿದ್ಯಾರ್ಜನೆಯ ಅವಧಿಯನ್ನು ಸಾರ್ಥಕಗೊಳಿಸಿಕೊಳ್ಳುವ ಮೂಲಕ ನಮ್ಮ ಪಾಲಕರ ನಿರೀಕ್ಷೆಗಳನ್ನು ಈಡೇರಿಸೋಣ. ಕಾಲ ಹರಣಕ್ಕೆ ಅವಕಾಶ ಬೇಡ. ಕಾಲವನ್ನು ಸಂಪತ್ತಾಗಿ ಉಳಿಸಿಕೊಳ್ಳುವ ಕೆಲಸ ಮಾಡೋಣ. ಕಾಲೇಜಿನಲ್ಲಿ ಪ್ರಸ್ತುತ ವರ್ಷವಿಡಿ ಕನ್ನಡ ಕಾರ್ಯಕ್ರಮಗಳ ಮೂಲಕ ಕನ್ನಡದ ಅರಿವು ನೀಡುವ ಸಂಕಲ್ಪ ನಮ್ಮದಾಗಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಪಿ.ವೈ. ಗುಡಗುಡಿ, ನಿರ್ದೇಶಕರಾದ ಭೀಮನಗೌಡ ಕುಕನಗೌಡ್ರ, ಹನುಮಂತಪ್ಪ ಮಲಗುಂದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಮಾಜಿ ಜಿಲ್ಲಾಧ್ಯಕ್ಷ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ತಾಲೂಕು ಅಧ್ಯಕ್ಷ ಷಣ್ಮುಕಪ್ಪ ಮುಚ್ಚಂಡಿ, ಪದ್ಮನಾಭ ಕುಂದಾಪೂರ ಅತಿಥಿಗಳಾಗಿದ್ದರು. ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಅಶೋಕ ಪಾಗದ, ಪ್ರೊ. ಪಂಪಾಪತಿ ಕಾಗಿನೆಲ್ಲಿ, ಪ್ರೊ. ಭೋವಿ ಹೊನ್ನಪ್ಪ, ಡಾ. ಬಿ.ಎಸ್. ಲಕ್ಷ್ಮೇಶ್ವರ, ಡಾ. ಎಂ.ಬಿ. ನಾಯಕ, ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಗಳಾದ ಆದಿತ್ಯ ಶೆಟ್ಟರ, ಸ್ನೇಹಾ ಸುಭಾಂಜಿ ವೇದಿಕೆಯಲ್ಲಿದ್ದರು.ಪ್ರತಿಭಾ ಪುರಸ್ಕಾರ:
ಕಳೆದ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಉತ್ತೀರ್ಣರಾದ ವಾಣಿಜ್ಯ ವಿಭಾಗದ ರಮ್ಯ ನಿಂಗೋಜಿ, ಕಲಾ ವಿಭಾಗದ ಆಸ್ಮಾ ಉಪ್ಪಿನ ಅವರನ್ನು ಗೌರವಿಸಲಾಯಿತು.ವೈಷ್ಣವಿ ಪುರೋಹಿತ ತಂಡದವರು ಪ್ರಾರ್ಥನೆ ಹಾಡಿದರು. ಐಕ್ಯೂಎಸಿ ಸಂಚಾಲಕ ಡಾ. ಪ್ರಕಾಶ ಹೊಳೇರ ಸ್ವಾಗತಿಸಿದರು. ಪ್ರೊ. ಅಶೋಕ ಪಾಗದ ಆಶಯ ನುಡಿ ನುಡಿದರು. ಪ್ರೊ. ವಿ.ಬಿ. ಸತ್ಯಸಾವಿತ್ರಿ ಅತಿಥಿಗಳನ್ನು ಪರಿಚಯಿಸಿದರು. ಕಾವ್ಯಾ ಮಲಗುಂದ, ಮನೋಜ ಕೋರಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಭೀಮಾವತಿ ಸೋಮನಕಟ್ಟಿ ವಂದಿಸಿದರು.