ಕರ್ನಾಟಕ ರಂಗಕಲೆಯ ಶ್ರೀಮಂತ ನೆಲೆ: ಬಿ. ನಾಗರಾಜ

| Published : Jan 24 2024, 02:01 AM IST

ಸಾರಾಂಶ

ಅನಾದಿ ಕಾಲದಿಂದ ಕಲೆ, ಸಂಸ್ಕೃತಿ, ಸಂಭ್ರಮವನ್ನು ಬಿಂಬಿಸುವ ಜನಪದ ಕಲೆಗಳು, ಸರ್ವಕಾಲಕ್ಕೂ ಮನರಂಜನೆಯನ್ನು ನೀಡುವುದರ ಜತೆಗೆ ನಮ್ಮ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿವೆ.

ಬಳ್ಳಾರಿ: ಕರ್ನಾಟಕವು ರಂಗ ಕಲೆಯ ಶ್ರೀಮಂತ ನೆಲೆಯಾಗಿದ್ದು, ಇದಕ್ಕೆ ಪ್ರಾಚೀನ ಐತಿಹ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ತಿಳಿಸಿದರು.

ಸಿರುಗುಪ್ಪ ಪಟ್ಟಣದ ಟಿಎಸ್ಎಚ್ಎಂಎಸ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಂಭ್ರಮ- 50ರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅನಾದಿ ಕಾಲದಿಂದ ಕಲೆ, ಸಂಸ್ಕೃತಿ, ಸಂಭ್ರಮವನ್ನು ಬಿಂಬಿಸುವ ಜನಪದ ಕಲೆಗಳು, ಸರ್ವಕಾಲಕ್ಕೂ ಮನರಂಜನೆಯನ್ನು ನೀಡುವುದರ ಜತೆಗೆ ನಮ್ಮ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿವೆ ಎಂದರು.

ಕಾರ್ಯಕ್ರಮದಲ್ಲಿ ಕಂಸಾಳೆ, ವೀರಗಾಸೆ, ಸುಗ್ಗಿ ಕುಣಿತ, ಡೊಳ್ಳು ಕುಣಿತ, ಬೇಡರ ಕುಣಿತ, ಕರಗ, ಕೋಲಾಟ, ಭರತನಾಟ್ಯ ಸಮೂಹ ನೃತ್ಯ, ಜಾನಪದ ಸಮೂಹ ನೃತ್ಯ, ನಂದಿಧ್ವಜ ಮುಂತಾದ ಕಲಾ ತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ಮನಸೊರೆಗೊಂಡವು.

ನಂತರದಲ್ಲಿ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆ ಸಾರಥ್ಯದಲ್ಲಿ ಶ್ರೀಕೃಷ್ಣ ಸಂಧಾನ ನಾಟಕವು ಸಭಿಕರನ್ನು ಮನರಂಜಿಸುವುದರ ಜತೆಗೆ ಶಿಕ್ಷಣ, ಆರೋಗ್ಯದ ಮಹತ್ವ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು ಹಾಗೂ ರಂಗಾಸಕ್ತರನ್ನು ನಗೆಗಡಲಿನಲ್ಲಿ ತೇಲಾಡಿಸಿತು.

ನಾಟಕವನ್ನು ನಿರ್ದೇಶಿಸಿದ ರಂಗ ಕಲಾವಿದ ಕರಿಯಪ್ಪ ಕವಲೂರ್ ಅವರು ತಮ್ಮ ಮಾತಿನ ಚಾಕಚಕ್ಯತೆಯಿಂದ ನಾಟಕದ ಮೇಷ್ಟ್ರು ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದರು. ಅರ್ಜುನ ಪಾತ್ರದಲ್ಲಿ ಮಣಿಕಂಠ, ಶ್ರೀಕೃಷ್ಣನಾಗಿ ವಿಜಯ್, ಭೀಮನ ಪಾತ್ರದಲ್ಲಿ ನಿಖಿಲ್, ಶಕುನಿಯಾಗಿ ಸುನಿಲ್, ರುಕ್ಮಿಣಿಯಾಗಿ ಸುಮಿತ್ರ, ದುರ್ಯೋಧನನಾಗಿ ತುಳಸಿ, ದುಶ್ಯಾಸನನ ಪಾತ್ರದಲ್ಲಿ ಪ್ರಶಾಂತ್, ಕೆಂಪಿಯಾಗಿ ಬಸವರಾಜ ತಮ್ಮ ಪಾತ್ರಗಳಿಗೆ ಜೀವ ತುಂಬಿದರು.

ಕಾಲೇಜಿನ ಪ್ರಾಂಶುಪಾಲ ಟಿ. ವೀರಭದ್ರಪ್ಪ, ಹಿರಿಯ ಪ್ರಾಧ್ಯಾಪಕ ಕೃಷ್ಣಪ್ಪ, ಚಂದ್ರಕಾಂತ, ಶಾಂತಮೂರ್ತಿ, ರಂಗಕರ್ಮಿ ಬೀರಳ್ಳಿ ರಾಮಿರೆಡ್ಡಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.