ಸಾರಾಂಶ
ಮೇಕೆದಾಟು ಯೋಜನೆ ಜಾರಿ ಮಾಡದ ಕಾರಣ ಕೆ.ಆರ್.ಎಸ್ ನಿಂದ ಹೊರ ಬರುವ ಸಾವಿರಾರು ಪ್ರಮಾಣದ ಕ್ಯುಸೆಕ್ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದರೂ ಜನ ಪ್ರತಿನಿಧಿಗಳುಈ ಬಗ್ಗೆ ಗಮನ ಹರಿಸಿಲ್ಲ.
ಕನ್ನಡಪ್ರಭ ವಾರ್ತೆ ಮದ್ದೂರು
ಮೇಕೆದಾಟು ಯೋಜನೆ ಶೀಘ್ರ ಪ್ರಾರಂಭಿಸಿ ಕುಡಿಯುವ ನೀರು ಮತ್ತು ಬೇಸಾಯಕ್ಕೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಬೆಂಗಳೂರು- ಮೈಸೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರವಾಸಿ ಮಂದಿರದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಗೆ ಆಗಮಿಸಿದ ವೇದಿಕೆ ಕಾರ್ಯಕರ್ತರು ಹಾಗೂ ರೈತ ಮುಖಂಡರು ಮೇಕೆದಾಟು ಯೋಜನೆ ಪ್ರಾರಂಭಿಸಲು ಮಿನಾಮೇಷ ಎಣಿಸುತ್ತಿರುವ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳು ಕೂಗಿದರು. ಕೆಲಕಾಲ ಹೆದ್ದಾರಿ ಸಂಚಾರ ತಡೆದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಂಶಕರ್ ಮಾತನಾಡಿ, ಮೇಕೆದಾಟು ಯೋಜನೆ ಜಾರಿ ಮಾಡದ ಕಾರಣ ಕೆ.ಆರ್.ಎಸ್ ನಿಂದ ಹೊರ ಬರುವ ಸಾವಿರಾರು ಪ್ರಮಾಣದ ಕ್ಯುಸೆಕ್ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದರೂ ಜನ ಪ್ರತಿನಿಧಿಗಳುಈ ಬಗ್ಗೆ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಯೋಜನೆ ಪೂರ್ಣಗೊಂಡರೆ 10 ಜಿಲ್ಲೆಯ ರೈತರಿಗೆ ಬೇಸಾಯ ಹಾಗೂ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಸರ್ಕಾರಗಳು ಯೋಜನೆ ಜಾರಿಗೆ ಮುಂದಾಗಬೇಕು. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವೇದಿಕೆಯಿಂದ ರಾಜ್ಯವ್ಯಾಪಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್.ಪ್ರಭುಲಿಂಗು, ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ವೆಂಕಟೇಶ್, ಸೊ.ಸಿ.ಪ್ರಕಾಶ್, ಸೊಂಪುರ ಉಮೇಶ್, ನಾಗರಾಜು, ಚಿಕ್ಕಣ್ಣ, ವೀರಪ್ಪ, ಗಣೇಶ, ವಿಜೇಂದ್ರಕುಮಾರ್ ಸೇರಿದಂತೆ ಇತರರು ಇದ್ದರು.