ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇರೆಗೆ ರಾಜ್ಯದ 10 ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದು, ಅಧಿಕಾರಿಗಳಿಗೆ ಸೇರಿದ 41ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿ ನಗ- ನಾಣ್ಯ ಸೇರಿದಂತೆ 23.20 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.
ಬುಧವಾರ ಬೆಳಗ್ಗೆ ಲೋಕಾಯುಕ್ತ ಪೊಲೀಸರು ಮಂಡ್ಯ, ತುಮಕೂರು, ಬಳ್ಳಾರಿ, ವಿಜಯನಗರ, ಚಾಮರಾಜನಗರ, ಚಿಕ್ಕಮಗಳೂರು, ಕೊಪ್ಪಳ, ಮೈಸೂರು, ಮಂಗಳೂರು ಮತ್ತು ಹಾಸನ ಜಿಲ್ಲೆಯ ಅಧಿಕಾರಿಗಳ ಮನೆ, ಕಚೇರಿ ಮತ್ತಿತರ ಕಡೆ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರು ಸೇರಿದಂತೆ ಅವರಿಗೆ ಸೇರಿದ 41ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. 23.20 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದರ ಮೌಲ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಲೋಕಾಯುಕ್ತ ಮೂಲಗಳು ಹೇಳಿವೆ.
ತುಮಕೂರು ಜಿಲ್ಲೆಯಲ್ಲಿ ಕೆಆರ್‌ಐಡಿಎಲ್ ಸಹಾಯಕ ಎಂಜಿನಿಯರ್ ಎ.ಹನುಮಂತರಾಯಪ್ಪ, ಮಂಡ್ಯದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಆರ್.ಹರ್ಷ, ಬಳ್ಳಾರಿ ಜಿಲ್ಲೆಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಬಿ.ರವಿ, ವಿಜಯನಗರ ಜಿಲ್ಲೆಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಆರ್.ಭಾಸ್ಕರ್.
ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ರವಿಕುಮಾರ್, ಚಿಕ್ಕಮಗಳೂರು ಜಿಲ್ಲೆಯ ವಾಣಿಜ್ಯ ತೆರಿಗೆ ಅಧಿಕಾರಿ ಕೆ.ಆರ್.ನೇತ್ರಾವತಿ, ವಿಜಯನಗರ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಆರ್‌ಎಫ್‌ಒ ರೇಣುಕಮ್ಮ.
ಮೈಸೂರು ಜಿಲ್ಲೆಯ ಮೂಡಾದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎನ್.ಯಜ್ಞೇಂದ್ರ, ಮಂಗಳೂರಿನಲ್ಲಿ ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ಶಾಂತ ಕುಮಾರ್, ಹಾಸನ ಜಿಲ್ಲೆಯಲ್ಲಿ ಆಹಾರ ನಿರೀಕ್ಷಕ ಜಿ.ಪಿ.ಜಗನ್ನಾಥ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.
ದಾಳಿಗೊಳಗಾದ ಅಧಿಕಾರಿಗಳ ಪೈಕಿ ಪಿಡಬ್ಲ್ಯೂಡಿ ಅಧಿಕಾರಿ ಎಚ್.ಆರ್.ಹರ್ಷ ಬಳಿ ಅತಿ ಹೆಚ್ಚು 4.50 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಅರಣ್ಯಾಧಿಕಾರಿ ರೇಣುಕಮ್ಮ ಅವರ ಬಳಿ 2.77 ಕೋಟಿ ರು. ಮೌಲ್ಯದ ಆಸ್ತಿ, ವಿಜಯನಗರದ ಜೆಸ್ಕಾಂ ಅಧಿಕಾರಿ ಆರ್.ಆರ್.ಭಾಸ್ಕರ್ ಬಳಿಕ ಎಂಟು ನಿವೇಶನಗಳು, ಮೂರು ಮನೆಗಳು ಇರುವುದು ಪತ್ತೆಯಾಗಿದೆ.
ಬಳ್ಳಾರಿಯ ಸ್ವಾತಕೋತ್ತರ ಕೇಂದ್ರದ ನಿರ್ದೇಶಕ ಬಿ.ರವಿ ಬಳಿ ಏಳು ನಿವೇಶನಗಳು ಪತ್ತೆಯಾಗಿವೆ.
ಇವರಿಗೆ ಸೇರಿದ ದಾವಣಗೆರೆಯಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿದೆ. ಮಂಡ್ಯದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಹರ್ಷ ಅವರ ಕಚೇರಿ, ಮನೆ ಹಾಗೂ ಅವರ ಮಾವನ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಅಲ್ಲದೇ, ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಿವಾಸ ಇದ್ದು, ಅಲ್ಲಿಯೂ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.