ಕರ್ನಾಟಕ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಅವರು ಜ.7 ಬುಧವಾರ ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅದಕ್ಕಿಂತ ಪೂರ್ವದಲ್ಲಿ ಲೋಕಾಯುಕ್ತ ಕಚೇರಿಯ ಅಧಿಕಾರಿ, ಸಿಬ್ಬಂದಿ ತಂಡವು ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಕರ್ನಾಟಕ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಅವರು ಜ.7 ಬುಧವಾರ ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅದಕ್ಕಿಂತ ಪೂರ್ವದಲ್ಲಿ ಲೋಕಾಯುಕ್ತ ಕಚೇರಿಯ ಅಧಿಕಾರಿ, ಸಿಬ್ಬಂದಿ ತಂಡವು ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.

ಲೋಕಾಯುಕ್ತರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆಯೇ ಆಡಳಿತ ವಲಯದಲ್ಲಿ ಬುಗಿಲು ಮುಗಿಲು ಮುಟ್ಟಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್‌ ತಂಡವು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ, ಕಡತಗಳ ವಿಲೇವಾರಿ, ಸಾರ್ವಜನಿಕರಿಂದ ದೂರು-ದುಮ್ಮಾನು, ಮೂಲಭೂತ ಸವಲತ್ತುಗಳು ಮತ್ತು ಸಮಸ್ಯೆಗಳ ಕುರಿತು ಮಾಹಿತಿಯನ್ನು ಕಲೆಹಾಕುತ್ತಿರುವ ಕಾರ್ಯಗಳು ಸಾಗಿವೆ.

ಮೊನ್ನೆಯಿಂದ ಲಿಂಗಸುಗೂರು, ದೇವದುರ್ಗ ಮತ್ತು ಸೋಮವಾರ ಜಿಲ್ಲಾ ಕೇಂದ್ರವಾದ ರಾಯಚೂರಿನ ಜಿಲ್ಲಾಡಳಿತ ಭವನ, ಮಹಾನಗರ ಪಾಲಿಕೆ ತಹಸೀಲ್ದಾರ್‌ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ತಪಾಸಣೆ ಕೈಗೊಂಡಿದ್ದು, ಜ.7ವರೆಗೆ ಈ ಕಾರ್ಯ ನಡೆಯಲಿದ್ದು ಉಳಿದ ಮಾನ್ವಿ, ಸಿಂಧನೂರು, ಸಿರವಾರ,ಅರಕೇರಾ ಮತ್ತು ಮಸ್ಕಿ ತಾಲೂಕುಗಳಿಗೂ ಹೋಗುವ ಸಾಧ್ಯತೆಗಳಿವೆ.

4 ತಿಂಗಳ ಬಳಿಕ ಮತ್ತೊಂಮ್ಮೆ ಶಾಕ್: ಜಿಲ್ಲಾ ಕೇಂದ್ರವಾದ ರಾಯಚೂರಿನಲ್ಲಿ ಕಳೆದ 2025ರ ಆ.28 ರಿಂದ 30ವರೆಗೆ ಪ್ರವಾಸ ಕೈಗೊಂಡಿದ್ದ ಕರ್ನಾಟಕ ಲೋಕಾಯುಕ್ತದ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ತಂಡವು ಮೂರು ದಿನಗಳ ಕಾಲ ವಿವಿಧ ಸರ್ಕಾರಿ ಕಚೇರಿಗಳು, ಆಸ್ಪತ್ರೆ, ವಸತಿ ನಿಲಯ, ಅಂಗನವಾಡಿ ಕೇಂದ್ರ, ಕೈಗಾರಿಕಾ ಪ್ರದೇಶ, ಕಲ್ಲು ಕ್ವಾರಿ ಗಣಿಗಾರಿಕೆ ಸ್ಥಳ ಸೇರಿದಂತೆ ವಿವಿಧೆಡೆ ದಿಢೀರ್ ಭೇಟಿ ನೀಡಿದ್ದರು. ಆ ವೇಳೆ ಕಂಡು ಬಂದ ಅವ್ಯವಸ್ಥೆ,ಲೋಪದೋಷಗಳಿಗೆ ಸಂಬಂಧಿಸಿದಂತೆ ಒಟ್ಟು 19 ಇಲಾಖೆಗಳ ವ್ಯಾಪ್ತಿಗೆ ಬರುವ ವಿಷಯಗಳ ಮೇಲೆ ಆಯಾ ಇಲಾಖೆಗಳ ನೂರಾರು ಅಧಿಕಾರಿಗಳ ವಿರುದ್ಧ ಸುಮಾರು 237 ಸ್ವಯಂ ಪ್ರೇರಿತ ದೂರು (ಸುಮೊಟೊ) ದಾಖಲಾಗಿದ್ದವು. ಇದೀಗ 4 ತಿಂಗಳ ಬಳಿಕ ಮತ್ತೆ ಲೋಕಾಯುಕ್ತರು ಜಿಲ್ಲೆಗೆ ಭೇಟಿ ನೀಡುತ್ತಿರುವುದು ಆಡಳಿತ ವರ್ಗಕ್ಕೆ ಶಾಕ್‌ ಹೊಡೆದಂತಾಗಿದೆ.

ಮುಗಿಲು ಮುಟ್ಟಿದ ಬುಗಿಲು: ಕಳೆದ ವಾರ ಲಿಂಗಸುಗೂರು, ದೇವದುರ್ಗ ತಾಲೂಕುಗಳಲ್ಲಿ ಲೋಕಾ ತಂಡವು ಸರ್ಕಾರಿ ಕಚೇರಿಗಳಿಗೆ ತೆರಳಿ ಪರಿಶೀಲಿಸಿತ್ತು. ಸೋಮವಾರ ರಾಯಚೂರು ಜಿಲ್ಲಾಡಳಿತ ಭವನ, ಪಾಲಿಕೆ, ತಹಸೀಲ್ದಾರ್, ಎಡಿಎಲ್‌ಆರ್‌ ಕಚೇರಿಗಳಿಗೆ ತೆರಳಿದ ಲೋಕಾ ತಂಡವು ಬೆಳಗ್ಗೆಯಿಂದ ರಾತ್ರಿ ವರೆಗೂ ತಪಾಸಣಾ ಕಾರ್ಯದಲ್ಲಿಯೇ ನಿತರಗೊಂಡಿತು. ಇದರಿಂದಾಗಿ ವಿವಿಧ ಇಲಾಖೆಗಳ ಮೇಲಾಧಿಕಾರಿಗಳಿಂದ ಹಿಡಿದು ಕ್ಲರ್ಕ್ ತನಕ ಎಲ್ಲರೂ ಆತಂಕ ಗೊಂಡಿದ್ದಾರೆ. ಲೋಕಾ ತಂಡವು ಯಾವ ರೀತಿಯಾಗಿ ಸ್ಪಂದಿಸುತ್ತೆಯೋ ಎನ್ನುವ ಭೀತಿಯಲ್ಲಿಯೇ ಕಳೆದ ಎರಡ್ಮೂರು ವಾರಗಳಿಂದ ಕಾಲಕಳೆಯುತ್ತಿದ್ದು, ಒಟ್ಟಿನಲ್ಲಿ ಲೋಕಾಯುಕ್ತರ ಪ್ರವಾಸವು ಆಡಳಿತ ವಲಯದಲ್ಲಿ ಉಂಟು ಮಾಡಿರುವ ಬುಗಿಲು ಮುಗಿಲು ಮುಟ್ಟುವಂತೆ ಮಾಡಿದೆ.

ಲೋಕಾ ಪ್ರವಾಸ: ಎಲ್ಲವೂ ಗೌಪ್ಯ

ಕರ್ನಾಟಕ ಲೋಕಾಯುಕ್ತರು ಪ್ರವಾಸದ ವಿಚಾರವಾಗಿ ಎಲ್ಲವೂ ಗೌಪ್ಯವಾಗಿವೆ. ಬುಧವಾರ ಪ್ರವಾಸ ಕೈಗೊಂಡಿರುವ ಮಾನ್ಯರು ಎಲ್ಲಿ? ಯಾವಾಗ? ಏನು ಮಾಡುತ್ತಾರೆ ಎನ್ನುವ ಗೊಂದಲವು ನಿರ್ಮಾಣಗೊಂಡಿದೆ. ಇಲಾಖೆಗಳ ಭೇಟಿ ಮಾಡುವರೋ, ಸಭೆ ನಡೆಸುವರೋ ಇಲ್ಲವೇ ತಂಡವು ಪರಿಶೀಲಿಸಿದ ಸಮಯದಲ್ಲಿ ಕಂಡು ಬಂದ ಲೋಪ-ದೋಷಗಳ ಮೇಲೆ ವಿಚಾರಣೆ ನಡೆಸುವರೋ ಎನ್ನುವುದರ ಮಾಹಿತಿ ಅಸ್ಪಷ್ಟವಾಗಿಯೇ ಉಳಿದಿದೆ.