ಅಜ್ಮಾನ್‌ನ ತುಂಬೆ ಮೆಡಿಸಿಟಿಗೆ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಇತ್ತೀಚೆಗೆ ಭೇಟಿ ನೀಡಿದರು.
ಮಂಗಳೂರು: ಡಾ. ತುಂಬೆ ಮೊದೀನ್ ಸ್ಥಾಪಿಸಿದ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ ಮತ್ತು ತರಬೇತಿಗಾಗಿ ಪ್ರಸಿದ್ಧಿ ಹೊಂದಿದ ಅಜ್ಮಾನ್‌ನ ತುಂಬೆ ಮೆಡಿಸಿಟಿಗೆ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಇತ್ತೀಚೆಗೆ ಭೇಟಿ ನೀಡಿದರು.
ತುಂಬೆ ಗ್ರೂಪ್‌ನ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊದೀನ್ ತುಂಬೆ ಮತ್ತು ಗಲ್ಫ್ ಮೆಡಿಕಲ್ ಯುನಿರ್ವಸಿಟಿಯ ಕುಲಪತಿ ಪ್ರೊ. ಮಂಡಾ ಮತ್ತಿತರರು ಸಚಿವರನ್ನು ಬರಮಾಡಿಕೊಂಡರು. ಗಲ್ಫ್ ಮೆಡಿಕಲ್ ಯುನಿರ್ವಸಿಟಿಯಲ್ಲಿ ವಿಶ್ವವಿದ್ಯಾಲಯದ ಸೃಜನಾತ್ಮಕ ಶೈಲಿಯ ಬೋಧನೆ ಮತ್ತು ಸಂಶೋಧನಾ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡ ನಂತರ ನಿಯೋಗ ಸಿಮ್ಯುಲೇಶನ್ ಕೇಂದ್ರಗಳು, ಶೈಕ್ಷಣಿಕ ಪ್ರಯೋಗಾಲಯಗಳು ಮತ್ತು ೧೧೧ ಕ್ಕೂ ಹೆಚ್ಚು ರಾಷ್ಟ್ರಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಜಿಎಂಯುನ ವಿಶಿಷ್ಟ ಇಂಟರ್ ಪ್ರೊಫೆಶನಲ್ ಕಲಿಕಾ ಪರಿಸರ ವ್ಯವಸ್ಥೆಯನ್ನು ಪರಿಶೀಲಿಸಿತು.ಅಲ್ಲಿನ ಪ್ರದೇಶದ ಅತಿದೊಡ್ಡ ಖಾಸಗಿ ಪುನರ್ವಸತಿ ಕೇಂದ್ರವಾದ ತುಂಬೆ ಫಿಸಿಕಲ್ ಥೆರಪಿ ಮತ್ತು ಪುನರ್ವಸತಿ ಆಸ್ಪತ್ರೆಗೆ ಭೇಟಿ ನೀಡಿದರು. ನಂತರ ತುಂಬೆ ದಂತ ಆಸ್ಪತ್ರೆ ಮತ್ತು ಯುಎಇಯ ಅತಿದೊಡ್ಡ ಶೈಕ್ಷಣಿಕ ಆಸ್ಪತ್ರೆಗಳಲ್ಲಿ ಒಂದಾದ ತುಂಬೆ ಯುನಿರ್ವಸಿಟಿ ಹಾಸ್ಪಿಟಲ್‌ಗೆ ಭೇಟಿ ನೀಡಿದರು. ಇದು ಅಡ್ವಾನ್ಸ್ಡ್ ಕ್ವಾಟರ್ನರಿ ಆರೈಕೆಯನ್ನು ನೀಡುತ್ತದೆ.
ಬಳಿಕ ಅಭಿಪ್ರಾಯ ವ್ಯಕ್ತಪಡಿಸಿದ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್, ತುಂಬೆ ಮೆಡಿಸಿಟಿಯನ್ನು ನೋಡುವಾಗ ಬಲವಾದ ದೃಷ್ಟಿಕೋನ ಹೇಗೆ ಶಿಕ್ಷಣ ಮತ್ತು ಹೆಲ್ತ್‌ಕೇರ್ ಆಗಿ ಪರಿವರ್ತನೆಗೊಳ್ಳಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಯುತ್ತದೆ. ಡಾ. ತುಂಬೆ ಮೊದೀನ್ ಇಷ್ಟು ಕಡಿಮೆ ಸಮಯದಲ್ಲಿ ನಿರ್ಮಿಸಿರುವ ಈ ಸಂಪೂರ್ಣ ಪರಿಸರ ವ್ಯವಸ್ಥೆ ನಿಜಕ್ಕೂ ಗಮನಾರ್ಹವಾಗಿದೆ. ಜಾಗತಿಕ ಗುಣಮಟ್ಟದ ತರಬೇತಿ, ನಾವೀನ್ಯತೆ ಮತ್ತು ಸೇವೆಗೆ ಅವರ ಬದ್ಧತೆ ಗಲ್ಫ್ ಮೆಡಿಕಲ್ ಯುನಿರ್ವಸಿಟಿ ಮತ್ತು ಅದರ ಆಸ್ಪತ್ರೆಯ ಪ್ರತಿಯೊಂದು ಮೂಲೆಯಲ್ಲೂ ಸ್ಪಷ್ಟವಾಗಿ ಕಾಣಸಿಗುತ್ತದೆ. ಕರ್ನಾಟಕದ ವಿದ್ಯಾರ್ಥಿಗಳು, ವೈದ್ಯರು ಮತ್ತು ಸಂಸ್ಥೆಗಳಿಗೆ ಪ್ರಯೋಜನವಾಗುವ ಸಹಯೋಗಗಳನ್ನು ಅನ್ವೇಷಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.ಇನ್ನೋರ್ವ ಸಚಿವ ಡಾ. ಎಂ. ಸಿ. ಸುಧಾಕರ್ ಮಾತನಾಡಿ, ಡಾ. ತುಂಬೆ ಮೊದೀನ್ ಅವರು ಜಾಗತಿಕ ಮಟ್ಟದಲ್ಲಿ ತುಂಬೆ ಹೆಸರನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡಿದ್ದಾರೆ ಎಂಬುದನ್ನು ನೋಡುವುದು ಸ್ಫೂರ್ತಿದಾಯಕವಾಗಿದೆ. ಕರ್ನಾಟಕದವರಾದ ಮೊದೀನ್ ಅವರು ಯುಎಇಯಲ್ಲಿ ಸಾಧಿಸಿದ ಸಾಧನೆ ನಮಗೆ ಹೆಮ್ಮೆ ತಂದಿದೆ. ಸಮಗ್ರ ಉನ್ನತ ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ತುಂಬೆ ಮೆಡಿಸಿಟಿ ವಿಶ್ವ ದರ್ಜೆಯ ಮಾದರಿಯಾಗಿ ನಿಂತಿದೆ. ಜಿಎಂಯುನಲ್ಲಿನ ಶೈಕ್ಷಣಿಕ ವಾತಾವರಣ, ವಿದ್ಯಾರ್ಥಿಗಳ ವೈವಿಧ್ಯತೆ ಮತ್ತು ಸಂಶೋಧನೆಗೆ ಪೂರಕವಾದ ಕಾರ್ಯಕ್ರಮಗಳು, ವಿನಿಮಯ ಮಾರ್ಗಗಳು ಮತ್ತು ದೇಶೀಯ ಸಂಸ್ಥೆಗಳೊಂದಿಗೆ ಸಹಯೋಗದ ಸಂಶೋಧನೆಗೆ ಅರ್ಥಪೂರ್ಣ ಅವಕಾಶಗಳನ್ನು ತೆರೆಯುತ್ತದೆ ಎಂದು ಶ್ಲಾಘಿಸಿದರು.