ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಮೊದಲಿನಿಂದಲೂ ಬಿಜೆಪಿಯವರಿಗೆ ಚಟ ಇದೆ. ಕಾಂಗ್ರೆಸ್ ಜಾರಿಗೊಳಿಸುವ ಕಾರ್ಯಕ್ರಮಕ್ಕೆ ಟೀಕೆ ಮಾಡುತ್ತಾರೆ. ಆ ಮೇಲೆ ಅದೇ ಯೋಜನೆಗಳನ್ನು ಅವರು ಅನುಷ್ಠಾನ ಮಾಡುತ್ತಾರೆ. ಕಾಂಗ್ರೆಸ್ ಕಾಫಿ ರೈಟ್ ತೆಗೆದುಕೊಂಡಂತೆ ವರ್ತಿಸುತ್ತಾರೆ. ಕಾಪಿ ರೈಟ್‌ನ್ನು ಜನರೇ ಹಾಕಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವ್ಯಂಗ್ಯವಾಡಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು. ಕರ್ನಾಟಕದ ಯೋಜನೆ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಯವರು ಲಾಡ್ಲಿ ಬೆಹನಾ ಎಂದು ಮಧ್ಯಪ್ರದೇಶದಲ್ಲಿ ಇದೇ ಯೋಜನೆ ಜಾರಿ ಮಾಡಿದರು. ಈಗ ಮಹಾರಾಷ್ಟ್ರದಲ್ಲಿ ಮಾಡುತ್ತಿದ್ದಾರೆ. ಜಮ್ಮು-ಕಾಶ್ಮೀರ, ಹರಿಯಾಣ ರಾಜ್ಯದ ಚುನಾವಣೆಯಲ್ಲೂ ಯೋಜನೆ ಜಾರಿಯ ಭರವಸೆ ನೀಡುತ್ತಿದ್ದಾರೆ ಎಂದು ಹೇಳಿದರು.
ಶೀಘ್ರ ಎರಡು ತಿಂಗಳ ಹಣ ಬಿಡುಗಡೆ:ಗೃಹಲಕ್ಷ್ಮೀ ಯೋಜನೆಯ ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಈಗಾಗಲೇ ಬಿಡುಗಡೆಯಾಗಿದ್ದು, ಯಜಮಾನಿಯರ ಖಾತೆಗೆ ಅ.7 ಮತ್ತು 9ರಂದು ಪ್ರತ್ಯೇಕವಾಗಿ ಎರಡು ತಿಂಗಳ ಹಣ ಜಮಾ ಆಗಲಿದ್ದು, ಯಾವುದೇ ಕಾರಣಕ್ಕೂ ಯೋಜನೆ ನಿಲ್ಲುವ ಪ್ರಶ್ನೆಯೇ ಇಲ್ಲ, ಮಹಿಳೆಯರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯ ಸಚಿವರೊಬ್ಬರು ಭೂಕಬಳಿಕೆ ಮಾಡಿದ್ದಾರೆಂದು ಬಿಜೆಪಿ ನಾಯಕ ಪಿ. ರಾಜೀವ್ ಆಧಾರ ರಹಿತ ಹೇಳಿಕೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ. ಆಧಾರ ಸಹಿತವಾಗಿ ಹೇಳಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದ ಅವರು, ಜಿ.ಟಿ. ದೇವೇಗೌಡರು ಸಿಎಂ ಸಿದ್ದರಾಮಯ್ಯ ಪರವಾಗಿ ಮಾತನಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದುವೇ ಸಾಕ್ಷಿ. ಸೋಮಶೇಖರ್ ಸಹ ಸರ್ಕಾರದ ಪರ ಮಾತನಾಡಿದ್ದಾರೆ. ಅವರೂ ಸಹ ಬಿಜೆಪಿ ಶಾಸಕರು. ನಾವು ಯಾವ ರೀತಿ ಸರ್ಕಾರ ನಡೆಸುತ್ತಿದ್ದೇವೆ, ಕೆಲಸ ಮಾಡುತ್ತಿದ್ದೇವೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಪ್ರತಿಕ್ರಿಯಿಸಿದರು.ಸಚಿವ ಸತೀಶ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರೆಲ್ಲಿ ಏನೂ ವಿಶೇಷ ಇಲ್ಲ. ನಾನೂ ಮೊನ್ನೆ ಹೋಗಿದ್ದೆ. ಎಐಸಿಸಿ ಅಧ್ಯಕ್ಷರು ನಮ್ಮ ಸರ್ವೋಚ್ಚ ನಾಯಕರು. ಕೆಲಸವಿದ್ದಾಗ ಅವರನ್ನು ಭೇಟಿ ಆಗುವುದು ಒಂದು ಸಹಜ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡರು.ಸಿಎಂ ರೇಸ್ ನಲ್ಲಿ ಸತೀಶ ಜಾರಕಿಹೊಳಿ ಹೆಸರು ಕೇಳಿಬರುತ್ತಿರುವ ವಿಚಾರಕ್ಕೆ ಉತ್ತರಿಸಿ, ಯಾರೇ ರೇಸ್‌ನಲ್ಲಿದ್ದರೂ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದರ ನಿರ್ದೇಶನ ಹಾಗೂ 136 ಜನ ಶಾಸಕರ ಇಚ್ಛೆಯ ಮೇರೆಗೆ ಮುಖ್ಯಮಂತ್ರಿ ಆಗಬಹುದು ಎಂದ ಅವರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಹೊರಗಿಟ್ಟು ಸಭೆ ಮಾಡಿದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.