ಸಾರಾಂಶ
ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿ ನಾಡಿನ ಸೌಹಾರ್ದ, ಪರಂಪರೆಯನ್ನು ಪ್ರೀತಿಸಿ, ಗೌರವಿಸುವ ಬಾನು ಮುಷ್ತಾಕ್ ಅವರ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿರುವುದರಿಂದ ಕನ್ನಡದ ಕೀರ್ತಿ ಪತಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರುವಂತಾಗಿದೆ ಎಂದು ಹೇಳಿದೆ.
ಮಳವಳ್ಳಿ: ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ, ಕನ್ನಡದ ಬರಹಗಾರ್ತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಿಳಿಸಿದೆ.
ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿ ನಾಡಿನ ಸೌಹಾರ್ದ, ಪರಂಪರೆಯನ್ನು ಪ್ರೀತಿಸಿ, ಗೌರವಿಸುವ ಬಾನು ಮುಷ್ತಾಕ್ ಅವರ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿರುವುದರಿಂದ ಕನ್ನಡದ ಕೀರ್ತಿ ಪತಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರುವಂತಾಗಿದೆ ಎಂದು ಹೇಳಿದೆ.ಭಾರತೀಯ ಜನತಾ ಪಕ್ಷ ಮತ್ತು ಹಿಂದುತ್ವವಾದಿಗಳು ಪ್ರಗತಿಪರ ಸಾಹಿತಿಗಳ ಆಯ್ಕೆಯನ್ನು ಸ್ವಾಗತಿಸಿ ಅಭಿನಂದಿಸುವ ಬದಲು ಎಂದಿನಂತೆಯೇ ಇಲ್ಲಿಯೂ ತಮ್ಮ ಧರ್ಮದ್ವೇಷ ಮುಂದುವರಿಸಿಕೊಂಡು ಹೋಗುವ ಮೂಲಕ ನಾಡ ಹಬ್ಬವನ್ನು ವಿಭಜನಕಾರಿ ದುಷ್ಕೃತ್ಯಕ್ಕೆ ಬಳಸುವ ಕುತಂತ್ರ ಮಾಡುತ್ತಿದ್ದಾರೆ ಎಂದು ಸಂಘದ ತಾಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಆರೋಪಿಸಿದ್ದಾರೆ.
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಮೂಲದವರು ಮತ್ತು ಮಹಿಳೆ ಎಂಬುವುದನ್ನೇ ಗುರಿಯಾಗಿಸಿಕೊಂಡು ನಾಡಿನ ಗೌರವವನ್ನು ಮುಗಿಲಿನೆತ್ತರಕ್ಕೇರಿಸಿದವರನ್ನು ಅಪಮಾನಿಸಿ, ಅಗೌರಿಸುವ ಬಿಜೆಪಿ ಮತ್ತು ಅವರ ಬೆಂಬಲಿಗರ ನಡೆ ನಾಚಿಕೆಗೇಡಿನದ್ದಾಗಿದೆ ಮತ್ತು ನಾಡಹಬ್ಬದಲ್ಲಿ ತನ್ನ ಕೋಮು ದ್ವೇಷದ ರಾಜಕಾರಣವನ್ನು ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದ್ದಾರೆ.ನಾಡಹಬ್ಬ ದಸರಾವನ್ನು ಈ ಹಿಂದೆ ಖ್ಯಾತ ಕವಿ ನಿಸಾರ್ ಅಹ್ಮದ್ ರವರು ಉದ್ಘಾಟನೆ ಮಾಡಿದ್ದರು. ದಸರಾ ಕನ್ನಡ ನಾಡಿನ ಹಬ್ಬವೇ ಹೊರತು ಹಿಂದುತ್ವ ವಾದಿಗಳ ಪಿತೂರಿಯ ಹಬ್ಬವಲ್ಲ ಎಂಬುವುದನ್ನು ಅರ್ಥ ಮಾಡಿಕೊಂಡು ಕ್ಷುಲ್ಲಕ ರಾಜಕಾರಣವನ್ನು ಕೈಬಿಡಬೇಕು ಎಂದು ಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ ಒತ್ತಾಯಿಸಿದ್ದಾರೆ.