ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಶಿಕ್ಷಣದವರೆಗೆ ಒಂದೇ ಕಡೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ದೊರೆಯಲಿದೆ. ಸರ್ಕಾರ ಶಿಕ್ಷಣಕ್ಕಾಗಿ ಎಲ್ಲಾ ಸೌಲಭ್ಯ ನೀಡುತ್ತಿದ್ದರೂ ಸಹ ಪೋಷಕರ ಖಾಸಗಿ ಶಾಲೆ ವ್ಯಾಮೋಹದಿಂದಾಗಿ ಕನ್ನಡ ಶಾಲೆಗಳು ಮುಚ್ಚುತ್ತಿವೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಾಲಾ ಶಿಕ್ಷಣ ಇಲಾಖೆ ಜಕ್ಕನಹಳ್ಳಿಗೆ ಮಂಜೂರು ಮಾಡಿರುವ ಕರ್ನಾಟಕ ಪಬ್ಲಿಕ್‌ ಶಾಲೆಯನ್ನು ಪೋಷಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಸ್ಥಾನೀಕಂ ಸಂತಾನರಾಮನ್ ಮನವಿ ಮಾಡಿದರು.

ಜಕ್ಕನಹಳ್ಳಿಯಲ್ಲಿ ವರಸಿದ್ಧಿ ವಿನಾಯಕ ಸೇವಾ ಸೇವಾ ಸಮಿತಿ ಮತ್ತು ಕನ್ನಡ ಯುವ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ನೂತನವಾಗಿ ನಿರ್ಮಿಸಿದ್ದ ಎತ್ತರದ ಬೃಹತ್ ಧ್ವಜಸ್ತಂಭದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಶಿಕ್ಷಣದವರೆಗೆ ಒಂದೇ ಕಡೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ದೊರೆಯಲಿದೆ. ಸರ್ಕಾರ ಶಿಕ್ಷಣಕ್ಕಾಗಿ ಎಲ್ಲಾ ಸೌಲಭ್ಯ ನೀಡುತ್ತಿದ್ದರೂ ಸಹ ಪೋಷಕರ ಖಾಸಗಿ ಶಾಲೆ ವ್ಯಾಮೋಹದಿಂದಾಗಿ ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡ ಭಾಷೆ ಬೆಳವಣಿಗಾಗಿ ಯುವಕರು ಕನ್ನಡ ದಿನಪತ್ರಿಕೆ ಮನೆಗೆ ತರಿಸಿಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳುವ ಜೊತೆಗೆ ಶಾಲಾ ಮಕ್ಕಳಲ್ಲೂ ಪತ್ರಿಕೆ ಓದುವ ಅಭ್ಯಾಸ ಬೆಳೆಸಬೇಕು. ಹಬ್ಬ ಹರಿದಿನಗಳಲ್ಲಿ ಕನ್ನಡ ಪುಸ್ತಕಗಳನ್ನು ಮಕ್ಕಳಿಗೆ ಕೊಡುಗೆನೀಡಿ ಎಂದರು.

ಮಕ್ಕಳಲ್ಲಿ ಓದುವ ಹವ್ಯಾಸ ಬೆಳಸಿ ಕನ್ನಡ ಭಾಷೆ ಬೆಳವಣಿಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಪ್ರತಿ ಗ್ರಾಮದಲ್ಲೂ ಸರ್ಕಾರಿ ಶಾಲೆ ಅಭಿವೃದ್ಧಿಯಲ್ಲಿ ತೊಡಗಿಸಿ ಬಲವರ್ಧನೆಯಾದರೆ ಮಾತ್ರ ಕನ್ನಡಭಾಷೆ ಉಳಿಯುತ್ತದೆ ಎಂದರು.

ರೈತ ಮತ್ತು ಕಾರ್ಮಿಕ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿಗೌಡ ಮಾತನಾಡಿ, ಯವಕರು ಸಂಘಟಿತರಾಗಿ ಕನ್ನಡಭಾಷೆ ಉಳಿಸಬೇಕಾದ ಅಗತ್ಯವಿದೆ. ಬೇರೆ ರಾಜ್ಯದವರಿಗೆ ಹೋಲಿಸಿದರೆ ನಮಗೆ ಭಾಷಾಭಿಮಾನ ಕಡಿಮೆ ಇದೆ. ಅಪ್ಪಟ ಸಾಹಿತ್ಯ ಕ್ಷೇತ್ರಕ್ಕೆ ಅಚ್ಚಳಿಯದ ಕೊಡುಗೆ ನೀಡಿರುವ ಮೇಲುಕೋಟೆ ಹೋಬಳಿಯ ಜಕ್ಕನಹಳ್ಳಿಯಲ್ಲಿ ಕನ್ನಡಭಾಷೆ ಬೆಳೆಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು.

ಈರೇಗೌಡನಕೊಪ್ಪಲು ಶಾಲೆ ಮುಖ್ಯಶಿಕ್ಷಕ ವೆಂಕಟೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದೇವೇಂದ್ರಣ್ಣ, ಲಕ್ಷ್ಮಿಪುರ ಕೃಷ್ಣಪ್ಪ, ಅಂಗಡಿ ಚಂದ್ರಣ್ಣ, ತಾಪಂ ಮಾಜಿ ಸದಸ್ಯ ರಾಮೇಗೌಡ ದೇವರಹಳ್ಳಿ, ಸುರೇಂದ್ರ ಜಕ್ಕನಹಳ್ಳಿ, ಸತ್ಯಜೆಗೌಡ, ಈರಣ್ಣ, ಪ್ರಕಾಶ್, ಮನು, ವೆಂಕಟೇಶ್, ಅವಿನಾಶ್, ಶಶಿಧರ್, ಶಿವು, ರಂಜೇಶ್, ನವೀನ್, ವಿನೋದ್, ವೆಂಕಟೇಶ್, ಸಂಜು, ಅರುಣ್‌ಕುಮಾರ್, ರವಿ, ದೀಪು, ಅಭಿಷೇಕ, ಸಂತೂ ಮುಂತಾದ ಯುವ ಮುಖಂಡರು ಇದ್ದರು.